ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ಸಮೀಪದ ನೆಹರುನಗರ ಎಂಬಲ್ಲಿ ಘನಗಾತ್ರದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ದ್ವಿಚಕ್ರವಾಹನ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲ್ಲಡ್ಕ ನಿವಾಸಿ ಸುಶಾಂತ್ ಕುಮಾರ್ ಎಂಬಾತನಿಗೆ ಲಾರಿ ಡಿಕ್ಕಿಯಾಗಿದೆ. ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕೆ.ಎನ್.ಆರ್.ಸಿ. ಕಂಪೆನಿಗೆ ಸೇರಿದ ಲಾರಿ ಇದಾಗಿದ್ದು, ಚಾಲಕ ಅಬ್ದುಲ್ ನೂರ್ ಖಾಜಿ ಎಂಬಾತ ನೆಹರುನಗರದಲ್ಲಿರುವ ಅನಧಿಕೃತ ಕ್ರಾಸ್‌ನಲ್ಲಿ ಬಂದಿದ್ದಲ್ಲದೆ ರಾಂಗ್ ಸೈಡ್‌ನಲ್ಲಿ ಚಲಾಯಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿಯ ಲಾರಿಗಳ ಅವತಾರಕ್ಕೆ ಬಲಿಯಾದವರ ಸಂಖ್ಯೆ ಒಂದೆರೆಡಲ್ಲ.

ಕೈ ಕಾಲು ಕಳೆದುಕೊಂಡವರು ಅನೇಕರು. ಆದರೂ ಕಂಪೆನಿಯು ಲಾರಿಗಳ ಚಾಲಕರಿಗೆ ಕಿವಿಹಿಂಡುವ ಕಾರ್ಯ ಮಾಡಿದಂತಿಲ್ಲ, ಪೋಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮ ಆಗಿದ್ದೇ ಆದರೆ ಅನೇಕ ಪ್ರಯಾಣಿಕರ ಜೀವ ಉಳಿಯುತ್ತಿತ್ತು. ಇನ್ನು ಕಾಮಗಾರಿ ಮುಗಿಯುವವರೆಗೆ ಇನ್ನೆಷ್ಟು ಅಮಾಯಕ ಜೀವಗಳನ್ನು ಇವರ ರೌದ್ರನರ್ತನಕ್ಕೆ ಬಲಿತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಕಂಪೆನಿಗಾಗಲಿ ಅಥವಾ ಇವರ ಕಾರ್ಮಿಕರಿಗಾಗಲಿ ಇನ್ನೊಂದು ಜೀವದ ಬೆಲೆ ಗೊತ್ತಿಲ್ಲವೆಂಬಂತೆ ಭಾಸವಾಗುತ್ತಿದೆ. ಹಾಗಾಗಿ ಮತ್ತೆ ಮತ್ತೆ ಇವರ ನಿರ್ಲಕ್ಷ್ಯತನಕ್ಕೆ ವಾಹನ ಸವಾರರು ಬಲಿಯಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.



