ಜೀಪು ಪಲ್ಟಿಯಾಗಿ ಕೃಷಿಕರೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿ ಸಂಭವಿಸಿದೆ.

ಬಿಳಿನೆಲೆ ಗ್ರಾಮದ ಬಿಳಿನೆಲೆ ಬೈಲು ನಿವಾಸಿ 68ವರ್ಷದ ಧರ್ಮಪಾಲ ಮೃತಪಟ್ಟಿದ್ದಾರೆ. ಧರ್ಮಪಾಲ ಅವರು ತನ್ನ ಮಗನೊಂದಿಗೆ ತೋಟಕ್ಕೆ ಔಷಧಿ ಸಿಂಪಡಿಸಿದ ಬಳಿಕ ತಮ್ಮ ಜೀಪಿನಲ್ಲಿ ಮನೆಗೆ ಹಿಂದಿರುಗುವ ವೇಳೆ ಮನೆ ಸಮೀಪ ಮಣ್ಣಿನ ರಸ್ತೆಯಲ್ಲಿ ಜೀಪು ಹತ್ತದೇ ಇದ್ದುದರಿಂದ ಧರ್ಮಪಾಲ ಅವರು ಜೀಪಿನಿಂದ ಇಳಿದು ರಸ್ತೆ ಬದಿ ನಿಂತಿದ್ದ ವೇಳೆ, ಜೀಪು ಚಲಾಯಿಸುತ್ತಿದ್ದ ಧರ್ಮಪಾಲರ ಮಗ ಜೀಪನ್ನು ಹತ್ತಿಸಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಜೀಪು ಒಮ್ಮೆಲೇ ಹಿಮ್ಮುಖ ಚಲಿಸಿ ರಸ್ತೆ ಬದಿ ನಿಂತಿದ್ದ ಧರ್ಮಪಾಲರ ಮೇಲೆ ಬಿದ್ದಿದೆ.

ಘಟನೆಯಿಂದ ತೀವ್ರ ಗಾಯಗೊಂಡ ಧರ್ಮಪಾಲ ಅವರು ಆಸ್ಪತ್ರೆಗೆ ದಾಖಲಿಸುವ ಮೊದಲೇ ಮೃತಪಟ್ಟಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.



