ಬೀದಿ ವ್ಯಾಪಾರದ ಜಾಗದಲ್ಲಿ ಅನಧಿಕೃತ ಆಟೋ ರಿಕ್ಷಾ ಪಾರ್ಕ್ ನಿರ್ಮಾಣ ಮಾಡಿ ಮಹಿಳಾ ಬೀದಿಬದಿ ವ್ಯಾಪಾರಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಪಾಲಿಕೆ ಅಧಿಕಾರಿಗಳಿಂದ ಕಳೆದ ಒಂದು ತಿಂಗಳಿಂದ ನಿರಂತರ ತೊಂದರೆ ನೀಡಿ ಮಹಿಳೆಯ ವ್ಯಾಪಾರಕ್ಕೆ ಅಡ್ಡಿಪಡಿಸಲಾಗುತ್ತಿತ್ತು ಎನ್ನಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಆಟೋ ಪಾರ್ಕಿಗೆ ಅನುಮತಿ ನೀಡದಿದ್ದರೂ ರಾಜಕೀಯ ಒತ್ತಡದಿಂದ ತೆರವುಗೊಳಿಸಲು ಬಲವಂತಪಡಿಸಲಾಗುತ್ತಿತ್ತು, ವ್ಯಾಪಾರದಲ್ಲಿ ಅಪಾರ ನಷ್ಟ ಮತ್ತು ಕಿರುಕುಳ ತಾಳಲಾರದೆ ಬೀದಿಬದಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಜೀವಿಸುತ್ತಿದ್ದ ಮಹಿಳೆ ಶಾಲಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದೀಗ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದು ಎ.ಜೆ ಆಸ್ಪತ್ರೆಯ ಐ ಸಿ ಯು ನಲ್ಲಿದ್ದಾರೆ. ನಗರದ ಬೋಂದೆಲ್ ಜಂಕ್ಷನ್ ಬಳಿ ಏರ್ ಪೋರ್ಟ್ ರಸ್ತೆಯಲ್ಲಿ ಪಾಲಿಕೆಯ ಅನುಮತಿ ಇಲ್ಲದೆ ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ಅನಧಿಕೃತ ರಿಕ್ಷಾ ಪಾರ್ಕ್ ನಿರ್ಮಾಣಗೊಂಡ ನಂತರ ಈ ಬೆಳವಣಿಗೆ ನಡೆಯುತ್ತಿದೆ ಎನ್ನಲಾಗಿದೆ.



