ಕಟ್ಟಡವೊಂದರಲ್ಲಿ ಸಾವಿರಾರು ರೂ ಮೌಲ್ಯದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಲಾಗಿದೆ ಎಂಬ ಆರೋಪದ ಮೇಲೆ ಕಂದಾಯ ಇಲಾಖೆ ಹಾಗೂ ಬಂಟ್ವಾಳ ಪೋಲೀಸರು ಜಂಟಿಯಾಗಿ ಕಾರ್ಯಚರಣೆ ನಡೆಸಿದ್ದಾರೆ.

ಗೋಳ್ತಮಜಲು ಗ್ರಾಮದ ಪಟ್ಟೆಕೋಡಿ ಎಂಬಲ್ಲಿರುವ ಕಟ್ಟಡವೊಂದರಲ್ಲಿ ಅಕ್ಕಿ ದಾಸ್ತಾನು ಇರಿಸಲಾಗಿರುವ ಆರೋಪವಿದ್ದು, ಕಲ್ಲಡ್ಕ ನಿವಾಸಿ ಉಮರಬ್ಬ ಅವರಿಗೆ ಸೇರಿದ ಕಟ್ಟಡ ಇದಾಗಿದೆ. ಇಲ್ಲಿ ಸುಮಾರು 21 ಕಿಂಟ್ವಾಲ್ ಬೆಳ್ತಿಗೆ ಹಾಗೂ 4 ಕಿಂಟ್ವಾಲ್ ಕುಚಲಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜೊತೆಗೆ ಮಾಲಕ ಉಮರಬ್ಬ ಹಾಗೂ ಈತನ ಜೊತೆ ಕೆಲಸಗಾರನಾಗಿರುವ ರಫೀಕ್ ಎಂಬಾತನ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಒಟ್ಟು 25 ಕಿಂಟ್ವಾಲ್ ಅಕ್ಕಿಯ ಚೀಲಗಳ ಜೊತೆ ಅಕ್ರಮವಾಗಿ ಅಕ್ಕಿಯನ್ನು ಪಡೆಯಲು ಉಪಯೋಗಿಸುತ್ತಿದ್ದ ರಿಕ್ಷಾ ಹಾಗೂ ತೂಕ ಮಾಪನ ಸೇರಿ ದಂತೆ ಒಟ್ಟು ಅಂದಾಜು 85 ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದಾಳಿ ನಡೆಸಿದ ಕಂದಾಯ ಇಲಾಖೆಯ ಆಹಾರ ನಿರೀಕ್ಷಕ ಪ್ರಶಾಂತ್ ಅವರು ತಿಳಿಸಿದ್ದಾರೆ.



