ಪ್ರಾಣಿ ಪ್ರಿಯರ ಸಂಘಟನೆ ಪೇಟಾ ಮೂಲಕ ನಟಿ ರವೀನಾ ಟಂಡನ್ ಮತ್ತು ಆಕೆಯ ಪುತ್ರಿ ರಾಶಾ ಥಡಾನಿ ಅವರು ವಿಶ್ವವಿಖ್ಯಾತ ಸಾವಿರ ಕಂಭದ ಬಸದಿಯನ್ನು ಹೊಂದಿರುವ ಮೂಡಬಿದಿರೆಯ ಜೈನ ಮಠಕ್ಕೆ ಯಾಂತ್ರಿಕ ಆನೆ ಐರಾವತವನ್ನು ಕೊಡುಗೆಯಾಗಿ ನೀಡಿದ್ದಾರೆ.

ಅದರ ಅನಾವರಣ ಕಾರ್ಯಕ್ರಮ ಮೂಡಬಿದ್ರೆಯಲ್ಲಿ ನಡೆದಿದೆ. ಪ್ರಶಸ್ತಿ ಪುರಸ್ಕೃತ ನಟಿ ರವೀನಾ ಟಂಡನ್ ಮತ್ತು ಆಕೆಯ ಪುತ್ರಿ ರಾಶಾ ಥಡಾನಿ ಪ್ರಾಣಿ ಪ್ರಿಯರ ಸಂಘಟನೆ ಪೇಟಾ ಮೂಲಕ ನೀಡಿರುವ ಈ ಆನೆ ನೈಜ ಆನೆಯನ್ನು ಹೋಲುತ್ತದೆ. ಮೂಡಬಿದ್ರೆ ಜೈನ ಮಠವು ಜೀವಂತ ಆನೆಯನ್ನು ಬಳಸದಿರುವ ಬಗ್ಗೆ ಕೈಗೊಂಡ ತೀರ್ಮಾನವನ್ನು ಗೌರವಿಸಿ ಮೂಡಬಿದ್ರೆ ಜೈನ ಮಠದ ಪಟ್ಟಾಭಿಷೇಕದ ಬೆಳ್ಳಿ ಮಹೋತ್ಸವದಂದು ಈ ಆನೆಯನ್ನು ಮಠಕ್ಕೆ ಕೊಡಮಾಡಲಾಗಿದೆ. ಇದರಿಂದ ಈ ತಂತ್ರಜ್ಞಾನವನ್ನು ಹೊಂದಿದ ಜಗತ್ತಿನ ಮೊದಲ ಜೈನ ದೇವಾಲಯ ಇದಾಗಿದೆ. ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ಹಿಂಸೆ ಇಲ್ಲದೆ ಸುರಕ್ಷಿತವಾಗಿ ಈ ಐರಾವತವನ್ನು ಬಳಸಬಹುದಾಗಿದೆ.

ಇದು ಆನೆಗಳು ತಮ್ಮ ಕುಟುಂಬದೊ0ದಿಗೆ ಕಾಡುಗಳಲ್ಲಿ ಉಳಿಯಲು ಸಹಾಯ ಮಾಡುತ್ತದೆ ಎನ್ನುತ್ತದೆ ಪೇಟಾ. ಮೂಡಬಿದಿರೆ ಜೈನ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐರಾವತವನ್ನು ಸಾಂಪ್ರದಾಯಿಕವಾಗಿ ಎದುರುಗೊಂಡು ಸ್ವಾಗತಿಸಲಾದಿದ್ದು, ಚಾತುರ್ಮಾಸ ನಿರತರಾಗಿರುವ 108 ಗುಲಾಬ್ ಭೂಷಣ್ ಮುನಿ ಮಹಾರಾಜ್ ಐರಾವತವನ್ನು ಅನಾವರಣಗೊಳಿಸಿದ್ದಾರೆ. ಈ ಸಂದರ್ಭ ಜೈನ ಮಠದ ಭಕ್ತರು, ಪೇಟಾದ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ದಿಗಂಬರ ಜೈನ ಮಠದ ಡಾ. ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ಮಹಾ ಸ್ವಾಮೀಜಿ ಅವರು ಐರಾವತದ ಕೊಡುಗೆ ಅನುಕಂಪ ಮತ್ತು ಅನುಭೂತಿಯ ನಮ್ಮ ಸಂಪ್ರದಾಯದ ಪ್ರತೀಕವಾಗಿದೆ, ಐರಾವತವು ದಯೆಯತ್ತ ನಮ್ಮ ಯಾನಕ್ಕೆ ಉತ್ತೇಜನ ನೀಡುತ್ತದೆ ಎಂದರು. ಆನೆಗಳಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ, ಜೈನ ದೇವಾಲಯಕ್ಕೆ ಐರಾವತ ಕೊಡುಗೆ ಆನೆಗಳನ್ನು ಅವುಗಳ ಕುಟುಂಬದ ಜೊತೆ ಇರಿಸುವ ಕಾಲಾತೀತ ಪರಂಪರೆಯನ್ನು ಗೌರವಿಸುವ ನನ್ನ ಪ್ರಾಮಾಣಿಕೆ ಪ್ರಯತ್ನ ಎಂದಿದ್ದಾರೆ



