ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಗಣೇಶೋತ್ಸವ ಪೂರಕವಾಗಿದ್ದು, ಆಡಂಬರವಿಲ್ಲದೆ ಇಲ್ಲಿ ಕೇವಲ ದೇವರ ಸಂಕೀರ್ತನೆಯ ಭಜನೆಯ ಮೂಲಕ ಗಣಪತಿಯ ಶೋಭಾಯಾತ್ರೆ ಸಾಗುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಅವರು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯುತ್ತಿರುವ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಬಂಟ ಸಮಾಜ ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸುತ್ತಿರುವ ಗಣೇಶೋತ್ಸವದಿಂದ ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದ್ರು.

ಉದ್ಯಮಿ ಅರುಣೋದಯ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಸಾಧಕರಾದ ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಮಾಜಿ ಸಂಚಾಲಕ ಜಯರಾಮ ಸಾಂತ, ಸುಶಾಂತ್ ಶೆಟ್ಟಿ, ಆತ್ಮೀ ಅಡಪ್ಪ ಹಾಗೂ ಸುರಾಗ್ ರೈ ಅವರನ್ನು ಸನ್ಮಾನಿಸಿದ್ದಾರೆ. ಇನ್ನು ಈ ಸಂದರ್ಭ ವಿವಿಧ ಬಂಟರ ಸಂಘಗಳ ಅಧ್ಯಕ್ಷರುಗಳಾದ ಅಶೋಕ್ ಶೆಟ್ಟಿ, ರತ್ನಾಕರಶೆಟ್ಟಿ ಎಕ್ಕಾರ್, ಮಹಾಬಲಚೌಟ, ಸತೀಶ್ ಶೆಟ್ಟಿ, ವಿಜಯ ಶೆಟ್ಟಿ, ಜಯರಾಮ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.



