ಬಂಟ್ವಾಳ ರೈಲು ನಿಲ್ದಾಣಕ್ಕೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಹೊಸದಾದ ಕಾಯಕಲ್ಪ ದೊರಕಿದ್ದು, ಕಾಮಗಾರಿ ಹಂತಿಮ ಹಂತಕ್ಕೆ ತಲುಪಿ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.

ಅಮೃತ ಭಾರತ್‌ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲು ನಿಲ್ದಾಣಕ್ಕೆ ಅಭಿವೃದ್ಧಿಯ ಅವಕಾಶ ದೊರಕಿದ್ದು, ಕಳೆದ ಜನವರಿಯಿಂದೀಚೆಗೆ ಕಾಮಗಾರಿ ವೇಗ ಪಡೆದುಕೊಂಡಿದೆ. 28.49 ಕೋಟಿ ರೂ. ವೆಚ್ಚದಲ್ಲಿ ನವವಿನ್ಯಾಸದೊಂದಿಗೆ ಕಾಮಗಾರಿ ನಡೆಯುತ್ತಿದ್ದು, ನಿಲ್ದಾಣಕ್ಕೆ ಹೊಸ ರೂಪ ನೀಡಲಾಗುತ್ತಿದೆ. 2024ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್‌ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದು, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್‌ನಾಯ್ಕ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ಮೊದಲ ಹಂತದ ಕಾಮಗಾರಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಇನ್ನು ಮೂರು, ನಾಲ್ಕು ತಿಂಗಳೊಳಗೆ ಯೋಜನೆಯಲ್ಲಿದ್ದ ಎಲ್ಲ ಕೆಲಸಗಳೂ ಕಂಪ್ಲೀಟ್ ಆಗುವ ನಿರೀಕ್ಷೆ ಇದೆ. ಮುಂಗಡ ಬುಕ್ಕಿಂಗ್ ಸಹಿತ ಟಿಕೆಟ್‌ಕೌಂಟರ್ ಸಾಕಷ್ಟು ಜಾಗದೊಂದಿಗೆ ನಿರ್ಮಾಣವಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೆಕ ವೈಟಿಂಗ್ ರೂಮ್‌ಗೆ ವ್ಯವಸ್ಥೆ, ಒಂದು ಕೆಫೆಟೀರಿಯಾ, ನಾಲ್ಕು ಕ್ಯಾಟರಿಂಗ್ ಸ್ಟಾಲ್‌ಗಳು, ಪ್ರತಿಯೊಂದು ಪ್ಲಾಟ್‌ಫಾರ್ಮ್ ಗಳಲ್ಲಿ ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಸ್ಟೆಶನ್ ಕಟ್ಟಡಕ್ಕೆ ಗ್ರಾನೈಟ್ ನೆಲಹಾಸು, ಇತರ ಭಾಗಕ್ಕೆ ಕಾಂಕ್ರಿಟ್ ಮತ್ತು ಟೈಲ್ಸ್ ಅಳವಡಿಕೆಯಾಗಿದೆ. ಇಡೀ ರೈಲು ನಿಲ್ದಾಣಕ್ಕೆ ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ ಒದಗಿಸುವುದು ಯೋಜನೆಯಲ್ಲಿದೆ. ಎಲ್.ಇ.ಡಿ. ಡಿಸ್‌ಪ್ಲೆ ಮೂಲಕ ರೈಲುಗಳು ಬಂದು ಹೋಗುವ ಕುರಿತು ಮಾಹಿತಿ, ಕೋಚ್ ಎಲ್ಲಿ ನಿಲ್ಲುತ್ತದೆ ಎಂಬ ಕುರಿತು ಡಿಸ್‌ಪ್ಲೆ ಬೋರ್ಡ್ ಅಳವಡಿಕೆ, ಸ್ಟೆಶನ್‌ನ ಮುಖದ್ವಾರವನ್ನು ಅಂದಗೊಳಿಸುವುದು ಈ ಅಭಿವೃದ್ಧಿಯ ಪಟ್ಟಿಯಲ್ಲಿದ್ದು, ಇನ್ನೂ ಆಗಬೇಕಷ್ಟೇ. ಈಗಾಗಲೇ ರೈಲು ನಿಲ್ದಾಣದ ವಿದ್ಯುದೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ವಿದ್ಯುತ್‌ರೈಲು ಓಡಾಟ ಆರಂಭಗೊಂಡರೆ, ನಿಲ್ದಾಣದಲ್ಲಿ ಪೂರಕವಾದ ವ್ಯವಸ್ಥೆಗಳು ದೊರಕುತ್ತವೆ. ಈಗಾಗಲೇ ಫೂಟ್ ಓವರ್ ಬ್ರಿಜ್ ಇದ್ದು, ಇನ್ನು ಲಿಫ್ಟ್ ಅಳವಡಿಕೆ ಕೆಲಸ ಆಗಬೇಕಾಗಿದೆ. ರೈಲ್ವೆ ನಿಲ್ದಾಣದ ಪ್ರವೇಶದಲ್ಲಿ ವಾಹನ ಪಾರ್ಕಿಂಗ್ ಹಾಗೂ ಹುಲ್ಲುಗಾವಲು ವ್ಯವಸ್ಥೆ ಅಂತಿಮ ಹಂತದಲ್ಲಿದೆ. ಎರಡನೇ ಪ್ಲಾಟ್ ಫಾರ್ಮ್ ಕೂಡ ಸುಸಜ್ಜಿತವಾಗುವ ಹಂತದಲ್ಲಿದೆ. ಇತ್ತೀಚೆಗೆ ಅಧಿಕಾರಿಗಳ ಭೇಟಿ ಸಂದರ್ಭ ಸಾರ್ವಜನಿಕರ ಮನವಿ ಮೇರೆಗೆ ಪೊಲೀಸ್ ಸಿಬ್ಬಂದಿ ಸುರಕ್ಷತೆಗೆ ನಿಯುಕ್ತರಾಗಿದ್ದಾರೆ. ಅನಧಿಕೃತವಾಗಿ ಪ್ಲಾಟ್ ಫಾರ್ಮ್ಗಳಲ್ಲಿ ಸಂಚರಿಸುವುದು, ಅನುಮಾನಾಸ್ಪದವಾಗಿ ನಡೆದಾಡುತ್ತಿರುವುವವರನ್ನು ಹಿಡಿದು ವಿಚಾರಿಸುತ್ತಿದ್ದಾರೆ. ಅಲ್ಲದೆ, ಸುತ್ತಮುತ್ತ ಯಾವುದೇ ಅನಧಿಕೃತ ಚಟುವಟಿಕೆಗಳು ನಡೆಯದಂತೆ ಗಮನಹರಿಸಲು ಆರಂಭಿಸಿದ್ದಾರೆ.



