ಅತ್ಯಾಚಾರದಿಂದ ಗರ್ಭವತಿಯಾಗಿದ್ದ ಯುವತಿಯ ಮಗುವನ್ನು ಮಾರಾಟ ಮಾಡಿರುವ ಪ್ರಕರಣ ಇದಾಗಿದ್ದು, ಶಿರ್ವ ಪೊಲೀಸರು ವೈದ್ಯ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಿ.ಸಿ.ರೋಡಿನ ವೈದ್ಯ ಡಾ.ಸೋಮೇಶ್ ಸೊಲೊಮನ್, ಮಂಗಳೂರಿನಲ್ಲಿ ಪೈಯಿಂಗ್ ಗೆಸ್ಟ್ ನಡೆಸುತ್ತಿರುವ ವಿಜಯಲಕ್ಷ್ಮೀ ಯಾನೆ ವಿಜಯ ಮತ್ತು ಅತ್ಯಾಚಾರ ಎಸಗಿದ ಆರೋಪಿ ನವನೀತ್ ನಾರಾಯಣ(25) ಬಂಧಿತ ಆರೋಪಿಗಳು. ಹಲವು ವರ್ಷಗಳಿಂದ ಮಕ್ಕಳಾಗದ ಕಾರಣಕ್ಕೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ 92ನೇ ಹೇರೂರು ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪ್ರಭಾವತಿ ಹಾಗೂ ರಮೇಶ್ ಮೂಲ್ಯ ದಂಪತಿ, ಮಗು ದತ್ತು ಪಡೆಯುವ ಬಗ್ಗೆ ಅವರ ಚಿಕ್ಕಮ್ಮನ ಮಗಳು ಪ್ರಿಯಾಂಕ ಅವರಲ್ಲಿ ತಿಳಿಸಿದ್ದರು. ಪ್ರಿಯಾಂಕ ಈ ವಿಚಾರದಲ್ಲಿ ದಂಪತಿಗೆ ವಿಜಯಲಕ್ಷ್ಮೀ ಅವರನ್ನು ಪರಿಚಯ ಮಾಡಿಸಿದ್ದರು. ವಿಜಯಲಕ್ಷ್ಮೀಯ ಪೆಯಿಂಗ್ ಗೆಸ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಅವಿವಾಹಿತ ಮಗಳು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಆ ಮಗುವನ್ನೇ ನೀಡುವುದಾಗಿ ವಿಜಯಲಕ್ಷ್ಮೀ ದಂಪತಿಗೆ ತಿಳಿಸಿದ್ದರು. ಹೀಗೆ ಗರ್ಭದಲ್ಲಿರುವ ಈ ಮಗುವನ್ನು ಹೆರಿಗೆಯ ಬಳಿಕ ಈ ದಂಪತಿಗೆ ಮಾರಾಟ ಮಾಡಲು ವಿಜಯಲಕ್ಷ್ಮೀ ಹಾಗೂ ಡಾ.ಸೋಮೇಶ್ ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ. ಗರ್ಭಿಣಿ ಯುವತಿ ಸ್ಕ್ಯಾನಿಂಗ್‌ಗೆ ಹೋದಾಗಲೆಲ್ಲ ಇವರು ಆಕೆಯ ಆಧಾರ್ ಕಾರ್ಡ್ ಬದಲು ಶಿರ್ವದ ಪ್ರಭಾವತಿ ಅವರ ಆಧಾರ್ ಕಾರ್ಡ್ ನೀಡುತ್ತಿದ್ದರು. ಹೀಗೆ ಗರ್ಭದಲ್ಲಿರುವಾಗಲೇ ಈ ಮಗು ಪ್ರಭಾವತಿ ಅವರದ್ದಾಗಿ ಮಾಡುವ ಪ್ಲಾನ್ ಇವರದ್ದಾಗಿತ್ತು ಎನ್ನಲಾಗಿದೆ.

ಯುವತಿ ಆ.3ರಂದು ಮಂಗಳೂರಿನ ಕೊಲಸೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಮಗುವನ್ನು ವಿಜಯಲಕ್ಷ್ಮೀ ಹಾಗೂ ಡಾ.ಸೋಮೇಶ್ ಅವರು ಪ್ರಭಾವತಿ ದಂಪತಿಗೆ 4.5ಲಕ್ಷ ರೂ. ಹಣಕ್ಕೆ ಮಾರಾಟ ಮಾಡಿದರು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ವಿಜಯ ಲಕ್ಷ್ಮೀಯ ಪೆಯಿಂಗ್ ಗೆಸ್ಟ್ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಅತ್ಯಾಚಾರದಿಂದ ಗರ್ಭವತಿಯಾಗಿದ್ದಳು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಯುವತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಈಕೆಯನ್ನು ಅವರ ಪರಿಚಯದ ನವನೀತ್ ನಾರಾಯಣ ಅತ್ಯಾಚಾರ ಎಸಗಿ ಗರ್ಭವತಿಯನ್ನಾಗಿ ಮಾಡಿದ್ದನು. ಇದೇ ಕಾರಣಕ್ಕೆ ಯುವತಿ ಹಾಗೂ ಆಕೆಯ ತಾಯಿಯನ್ನು ವಿಜಯಲಕ್ಷ್ಮೀ ಪೆಯಿಂಗ್ ಗೆಸ್ಟ್ನಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ. ಯುವತಿಗೆ ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸಿದ್ದು, ಸರಿಯಾದ ಚಿಕಿತ್ಸೆ ಕೂಡ ಸಿಗದ ಕಾರಣಕ್ಕೆ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ, ಮತ್ತೆ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ವಿಜಯಲಕ್ಷ್ಮೀ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು, ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕ್ಯಾಂಟಿನ್ ಕೂಡ ನಡೆಸುತ್ತಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಸಾಕಲು ಸಾಧ್ಯವಾಗದ ಹಾಗೂ ಅನೈತಿಕವಾಗಿ ಹುಟ್ಟಿದ ಮಕ್ಕಳನ್ನು ವಿಜಯಲಕ್ಷ್ಮೀ ಇದೇ ರೀತಿ ಮಾರಾಟ ಮಾಡುತ್ತಿದ್ದರೆಂಬ ಮಾಹಿತಿ ಕೂಡ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಕಾರ್ಕಳದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ತನಿಖೆ ನಡೆಸುತ್ತಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಇವರು ತಿಳಿಸಿದ್ದಾರೆ. ಪ್ರಭಾವತಿ ಹಾಗೂ ರಮೇಶ್ ಮೂಲ್ಯ ದಂಪತಿ 4 ದಿನಗಳ ಹಿಂದೆ ಹೆಣ್ಣು ಮಗುವನ್ನು ಪೋಷಣ್ ಟ್ರ‍್ಯಾಕರ್‌ನಲ್ಲಿ ರಿಜಿಸ್ಟರ್ ಮಾಡಲು ಅಂಗನವಾಡಿಗೆ ಕರೆದು ಕೊಂಡು ಬಂದಿದ್ದರು. ಆ ಸಂದರ್ಭದಲ್ಲಿ ಈ ದಂಪತಿಗೆ ಮಗು ಇಲ್ಲದೇ ಇರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆಗೆ ತಿಳಿದುಬಂದಿತು ಎನ್ನಲಾಗಿದೆ. ಈ ಕುರಿತು ವಿಚಾರಿಸಿದಾಗ ದಂಪತಿ, ಮಂಗಳೂರಿನ ಆಸ್ಪತ್ರೆಯ ಮೂಲಕ ಮಗುವನ್ನು ಪಡೆದುಕೊಂಡು ಬಂದಿರುವುದಾಗಿ ಮಾಹಿತಿ ನೀಡಿದರು. ಈ ಕುರಿತು ಮಕ್ಕಳ ರಕ್ಷಣಾ ಸಮಿತಿಯವರು ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಭಾವತಿ ಅವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂತು.



