ವ್ಯಕ್ತಿಯೋರ್ವರಿಗೆ ಆನ್ ಲೈನ್ ಟ್ರೇಡಿಂಗ್ ಮೂಲಕ ಮೋಸ ಮಾಡಿದ್ದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸುರತ್ಕಲ್ ಕೋಡಿಕೆರೆ ನಿವಾಸಿ ಮೊಹಮದ್ ಕೈಸ್(20), ಹೆಜಮಾಡಿ ಕನ್ನಂಗಾರ್ ನಿವಾಸಿ ಅಹಮದ್ ಅನ್ವೀಜ್(20), ಬಂಟ್ವಾಳ ನಿವಾಸಿ ಸಪ್ವಾನ್(30), ಮತ್ತು ತಾಸೀರ್ (31) ಎಂದು ಗುರುತಿಸಲಾಗಿದೆ. ಕಾಪು ಶಂಕರಪುರ ನಿವಾಸಿ ಜೊಸ್ಸಿ ರವೀಂದ್ರ ಡಿಕ್ರೂಸ್(54) ಎಂಬವರಿಗೆ ಫೇಸ್ ಬುಕ್ ಮೂಲಕ ಆರೋಪಿ ಅಗರ್ವಾಲ್ ಎಂಬ ಮಹಿಳೆಯ ಪರಿಚಯವಾಗಿತ್ತು. 2025ರ ಫೆಬ್ರವರಿ ತಿಂಗಳಲ್ಲಿ ಅವಳ ವಾಟ್ಸಾಪ್ ನಂಬರನ್ನು ನೀಡಿ ಎಫ್‌ಎಕ್ಸ್ಸಿಎಮ್ ಗೋಲ್ಡ್ ಟ್ರೇಡಿಂಗ್ ಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ಮೆಸೇಜ್ ಮಾಡಿದ್ದು, ಅದನ್ನು ನಂಬಿದ ಜೊಸ್ಸಿ ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 75,00,000/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಈ ಬಗ್ಗೆ ಜೊಸ್ಸಿ ರವೀಂದ್ರ ಡಿಕ್ರೂಸ್ ಅವರು ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಗೆ ಇಳಿದ ಪೊಲೀಸರ ವಿಶೇಷ ತಂಡವು ಆರೋಪಿಗಳನ್ನು ಬಂಧಿಸಿ ಅವರಿಂದ ಮೊಬೈಲ್ ಪೋನ್ ಗಳನ್ನು ಹಾಗೂ ಆರೋಪಿಗಳಿಂದ ರೂ 4,00,000/- ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸದ್ರಿ ಪ್ರಕರಣದ ಇತರ ಆರೋಪಿಗಳು ತಲೆಮರೆಸಿ ಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.



