ಉಪ್ಪಿನಂಗಡಿ ಸಮೀಪದ ಕಡಂಬು ಎಂಬಲ್ಲಿ ಕೃಷಿಕರೊಬ್ಬರ ಮನೆಯಿಂದ ದನವನ್ನು ಕದ್ದು ಬಳಿಕ ಅವರ ಜಾಗದಲ್ಲೇ ಮಾಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್, ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ ಮತ್ತು ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ ಎಂದು ಗುರುತಿಸಲಾಗಿದೆ. ಆರೋಪಿಗಳ ಮೇಲೆ ಅಗಸ್ಟ್ 14ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಬಳಿ ಜಾನುವಾರು ಕಳ್ಳತನ ಮಾಡಿ ಬಳಿಕ ಅದನ್ನು ಅಲ್ಲೇ ಪರಿಸರದಲ್ಲಿ ಮಾಂಸ ಮಾಡಿದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಮಾಡಿದ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಮೂವರ ವಿಚಾರಣೆ ನಡೆಸಿದಾಗ ಉಪ್ಪಿನಂಗಡಿ ಸಮೀಪದ ಕಡಂಬು ಎಂಬಲ್ಲಿ ದನ ಕಳ್ಳತನ ಮಾಡಿ ಬಳಿಕ ಅಲ್ಲೆ ಅದನ್ನು ಕಡಿದು ಅದರ ಮಾಂಸವನ್ನು ಕೊಂಡೊಯ್ದ ಪ್ರಕರಣದಲ್ಲೂ ಇವರೇ ಆರೋಪಿಗಳು ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.



