ಕರಾವಳಿಯಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಅಪಾಯಗಳು ಎದುರಾಗುತ್ತಿರುವುದರಿಂದ ಕೆಲವೊಂದು ಸುರಕ್ಷತಾ ಮಾರ್ಗಗಳನ್ನು ಅಳವಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಕುದುರೆಮುಖ ವನ್ಯಜೀವಿ ವಲಯದ ಅರಣ್ಯ ವ್ಯಾಪ್ತಿಯೊಳಗಿರುವ ಎಲ್ಲ ಜಲಪಾತಗಳಿಗೂ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ. ಬಿರುಸಿನ ಮಳೆಯ ನಡುವೆ ಜಲಪಾತಗಳಿಗೆ ತೆರಳುವುದು ಅತ್ಯಂತ ಅಪಾಯಕಾರಿಯಾಗಿರುವುದು ಹಾಗೂ ಕೊಲ್ಲೂರು ಸಮೀಪದ ಜಲಪಾತದಲ್ಲಿ ಯುವಕ ನೀರು ಪಾಲಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯು ವನ್ಯಜೀವಿ ವಲಯದಲ್ಲಿ ಬರುವ ಬಂಡಾಜೆ ಅರ್ಬಿ, ಎರ್ಮಾಯಿ ಫಾಲ್ಸ್‌ಗಳನ್ನು ವೀಕ್ಷಿಸಲು ಮುಂದಿನ ಆದೇಶದ ವರೆಗೆ ನಿಷೇಧ ಹೇರಿದೆ.



