ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರ್ಲಾಲು ಎಂಬಲ್ಲಿ ಕೆಲವು ದಿನಗಳ ಹಿಂದೆ ತಲವಾರು ತೋರಿಸಿ ಬೆದರಿಸಿ ಕೊಟ್ಟಿಗೆಯಲ್ಲಿದ್ದ ದನಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.

ಕಾರ್ಕಳ ನಲ್ಲೂರು ಗ್ರಾಮದ ಬೋರ್ಕಟ್ಟೆಯ ಯೂನಿಸ್, ಮೂಡಬಿದ್ರೆ ಕಲ್ಲಬೆಟ್ಟುವಿನ ನಾಸೀರ್, ಮೂಡಬಿದ್ರೆ ಪುತ್ತಿಗೆ ಗ್ರಾಮದ ಮಿಜಾರಿನ ಇಕ್ಬಾಲ್ ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ್ದ 2 ತಲವಾರು, ಕಾರು, ಬೋಲೆರೋ ವಾಹನ, 5 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 5,87,000 ರೂ. ಎಂದು ಅಂದಾಜಿಸಲಾಗಿದೆ. ಸೆ.28ರಂದು ರಾತ್ರಿ ಜಯಶ್ರೀ ಎಂಬವರ ಮನೆಯ ದನದ ಕೊಟ್ಟಿಗೆಗೆ ಮೂವರು ಅಪರಿಚಿತ ವ್ಯಕ್ತಿಗಳು ತಲವಾರುಗಳೊಂದಿಗೆ ನುಗ್ಗಿ, ತಲವಾರು ತೋರಿಸಿ ಬೆದರಿಸಿ, ಕೊಟ್ಟಿಗೆಯಲ್ಲಿದ್ದ ಸುಮಾರು 35,000ರೂ. ಮೌಲ್ಯದ 3 ಹಸುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



