ಶಾಲಾ ಕಾಲೇಜುಗಳ ಬಸ್‌ಗಳಿಗೆ ನಕಲಿ ವಿಮೆ ಪಾಲಿಸಿ ಮಾಡಿ ಕೋಟ್ಯಂತರ ರೂ. ವಂಚಿಸುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಈ ಸಂಬ0ಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದು, ಸಾಸ್ತಾನ ಕುಂಜಿಕೆರೆ ರಸ್ತೆಯ ರಾಕೇಶ ಎಸ್ ಹಾಗೂ ಶಿರಸಿಯ ಚರಣ ಬಾಬು ಮೇಸ್ತ ಬಂಧಿತ ಆರೋಪಿಗಳು. ಆರೋಪಿಗಳು ನಕಲಿ ವಿಮೆ ಮೂಲಕ ಕೋಟ್ಯಂತರ ರೂ. ಹಣ ವಂಚನೆ ಎಸಗಿದ್ದಾರೆ ಎಂದಿದ್ದಾರೆ.

2024ರ ನ.25ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಬಾಡಿ – ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಶಾಲಾ ವಾಹನವೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುಂದಾಪುರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ರಿಕ್ಷಾದ ಚಾಲಕ ವಿಮಾ ಪರಿಹಾರವಾಗಿ 15,95,000ರೂ. ಹಣ ಕೋರಿಕೊಂಡಿದ್ದಾರೆ. ಈ ಸಂಬ0ಧ ವಿಮಾ ಕಂಪೆನಿಯವರು ಪರಿಶೀಲಿಸಿದಾಗ ಶಾಲಾ ಬಸ್ಸಿನ ವಿಮಾ ಪಾಲಿಸಿಯು ನಕಲಿ ಆಗಿರುವುದು ಕಂಡುಬ0ದಿದೆ. ನಕಲಿ ವಿಮಾ ಪಾಲಿಸಿಯನ್ನು ಸೃಷ್ಟಿಸಿ ಠಾಣೆಗೆ ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಈ ಮೂಲಕ ವಿಮಾ ಕಂಪೆನಿಗೆ ಮೋಸ ಮಾಡಿರುವುದಾಗಿ ರಿಲಯನ್ಸ್ ಜನರಲ್ ಇನ್ಯೂರೆನ್ಸ್ ಕಂಪೆನಿಯ ಮೇನೇಜರ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಶೇಷ ತಂಡ ತನಿಖೆ ನಡೆಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.



