ಮರದ ರೆಂಬೆಗೆ ಹಗ್ಗದಿಂದ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮಾನವನ ತಲೆ ಬುರುಡೆ, ಅಸ್ಥಿಪಂಜರ ಮತ್ತು ಇತರೆ ಅವಶೇಷಗಳು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.

ಅಕ್ಷಯ ಫಾರ್ಮ್ ಒಳಗಡೆಯ ಮರದ ಕೆಳಗಡೆ ಮಾನವನ ಅಸ್ಥಿ ತಲೆಬುರುಡೆ ಮತ್ತು ಅವಶೇಷಗಳು ಪತ್ತೆಯಾಗಿವೆ. ಫಾರ್ಮ್ ನೊಳಗಡೆ ತೋಟದ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರಿಗೆ ಅಸ್ಥಿಗಳು ಕಾಣಸಿಕ್ಕಿವೆ. ಸ್ಥಳದಲ್ಲಿ ಹಸಿರು ಬರ್ಮುಡ ಚಡ್ಡಿ, ಹಸಿರು ಟೀ ಶರ್ಟ್ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಇದು ಗಂಡಸಿನ ದೇಹದ ಅವಶೇಷಗಳಂತೆ ಕಾಣುತ್ತದೆ. ಮರದ ಗೆಲ್ಲಿನಲ್ಲಿ ನೈಲಾನ್ ಹಗ್ಗದ ನೇಣಿನ ಕುಣಿಕೆ ಇದ್ದು ಅದರಲ್ಲಿ ಹೆಡ್ ಫೋನ್ ಮತ್ತು ಎಲುಬುಗಳು ನೇತಾಡುತ್ತಿವೆ. ಮತ್ತೊಂದು ಗೆಲ್ಲಲ್ಲಿ ಕೇಸರಿ ಶಾಲು ಜೋತು ಬಿದಿದ್ದು ಬರ್ಮುಡಾದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆಯೆಂದು ಹೇಳಲಾಗಿದೆ.

ಸ್ಥಳಕ್ಕೆ ಉಳ್ಳಾಲ ಪೊಲೀಸರು ಮತ್ತು ಸೋಕೊ ತಂಡವು ಭೇಟಿ ನೀಡಿದ್ದು ಬುರುಡೆ, ಎಲುಬುಗಳು ಮತ್ತು ಇತರ ಅವಶೇಷಗಳನ್ನ ಸಂಸ್ಕರಿಸಿ ಪರಿಶೀಲನೆಗೆ ಕಳುಹಿಸಿದೆ. ದೇಹವು ಸಂಪೂರ್ಣ ಕೊಳೆತು ಹೋಗಿದ್ದು ಎಲುಬು ಬುರುಡೆಯ ಅವಶೇಷಗಳು ಮಾತ್ರ ಉಳಿದಿದ್ದು ಅನೇಕ ತಿಂಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ. ಅಕ್ಷಯ ಫಾರ್ಮ್ ಸುತ್ತಲೂ ಆವರಣ ಗೋಡೆಯಿದ್ದು ಇದರೊಳಗೆ ಘಟನೆ ಹೇಗೆ ನಡೆಯಿತೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



