ದಕ್ಷಿಣ ಕನ್ನಡ: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಭಾರತೀಯ ಕೃಷಿ ಅನುಸಂಧಾನ ಪರಿಷತ್-ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು, ಸಮೀತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ, ಬೆಂಗಳೂರು, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ, (ಮ್ಯಾನೇಜ್), ಹೈದರಾಬಾದ್ ಮತ್ತು ಕೃಷಿ ಇಲಾಖೆ, ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ ನಾಲ್ಕು ಮತ್ತು ಐದನೇ ತಂಡದ ಪ್ರಮಾಣ ಪತ್ರ ವಿತರಣಾ ಸಮಾರಂಭವು ಕೆವಿಕೆ ಮಂಗಳೂರಿನಲ್ಲಿ ನಡೆಯಿತು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೆಶಕರು ಹಾಗೂ ದೇಶೀಯ ನಿರ್ದೇಶಕರಾದ ಡಾ. ವಿ.ಎಲ್. ಮಧುಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೃಷಿಯಲ್ಲಿ ತಂತ್ರಜ್ಞಾನ, ಗೊಬ್ಬರಗಳ ಸರಿಯಾದ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪರಿಕರ ಮಾರಾಟಗಾರರು ರೈತರಿಗೆ ತಲುಪಿಸುವ ಕಡೆಗೆ ಇನ್ನೂ ಹೆಚ್ಚಿನ ಕೆಲಸ ಮಾಡಬೇಕು ಎಂದು ಹೇಳಿದರು.
ದೇಸಿ ತರಬೇತಿಯ ರಾಜ್ಯ ನೋಡಲ್ ಅಧಿಕಾರಿಯಾದ ಡಾ. ಬಿ. ಕಲ್ಪನಾ ಇವರು ಮಾತನಾಡಿ ಪರಿಕರ ಮಾರಾಟಗಾರರಿಗೆ ದೇಸಿ ತರಬೇತಿಯ ಅಗತ್ಯತೆಯ ಬಗ್ಗೆ, ದೇಸಿ ತರಬೇತಿಯ ಮೂಲ ಉದ್ಧೇಶದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಪರಿಕರ ಮಾರಾಟಗಾರರು ವಿಶ್ವವಿದ್ಯಾಲಯಕ್ಕೆ, ಇಲಾಖೆಗಳಿಗೆ ಹೆಚ್ಚಿನ ಭೇಟಿ ನೀಡಿ ರೈತರಿಗೆ ಮಾಹಿತಿ ರವಾನಿ ಸುವುದರಿಂದ ರೈತರ ನಂಬಿಕೆಯನ್ನು ಹೆಚ್ಚಿಸಬಹುದು.ಪರಿಕರ ಮಾರಾಟಗಾರರಿಂದ ರೈತ ಸಮುದಾಯಕ್ಕೆ ಹೆಚ್ಚಿನ ಅನುಕೂಲಗಳಾಗಲಿ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಡಾ. ಕೆಂಪೇಗೌಡ ಮಾತನಾಡಿ ಪರಿಕರ ಮಾರಾಟಗಾರರನ್ನು ವಿಸ್ತರಣಾ ಕಾರ್ಯ ಕರ್ತರನ್ನಾಗಿ ಮಾಡುವಲ್ಲಿ ದೇಸಿ ತರಬೇತಿಯು ಯಶಸ್ವಿಯಾಗಿದೆ. ಪರಿಕರ ಮಾರಾಟಗಾರರು ವ್ಯಾಪಾರದಲ್ಲಿ ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕವಾಗಿದೆ. ವ್ಯಾಪಾರದ ಜೊತೆಗೆ ಸೇವಾ ಮನೋಭಾವವನ್ನು ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮೀನುಗಾರಿಕಾ ಕಾಲೇಜಿನ ಡೀನ್ ಆದ ಡಾ. ಆಂಜನೀಯಪ್ಪ ಹೆಚ್. ಎನ್. ಉಪಸ್ಥಿತರಿದ್ದರು. ಸಹಾಯಕ ವಿಸ್ತರಣಾ ನಿರ್ದೇಶಕರಾದ ಡಾ. ಎಸ್. ಆರ್. ಸೋಮಶೇಖರ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಯಾದ ಡಾ.ರವೀಂದ್ರಗೌಡ ಪಾಟೀಲ್, ಬೇಸಾಯ ಶಾಸ್ತ್ರ ವಿಜ್ಞಾನಿ ಶ್ರೀ ಹರೀಶ್ ಶೆಣೈ, ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ ಎಲ್., ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ ಆರ್., ದೇಸಿ ಅನುವುಗಾರರಾದ ಕುಮಾರಿ ವಿಜಿತ ವಿ. ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಮತ್ತು ದೇಸಿ ಸಂಯೋಜಕರಾದ ಡಾ. ಕೇದಾರನಾಥ ಸ್ವಾಗತಿಸಿದರು, ಪಶು ವಿಜ್ಞಾನಿಯಾದ ಡಾ. ಶಿವಕುಮಾರ್ ಆರ್. ವಂದಿಸಿದರು, ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಜೀವನ್ ಕೊಲ್ಯ ಕಾರ್ಯಕ್ರಮವನ್ನು ನಿರೂಪಿಸಿದರು.




