ಉಡುಪಿ ಜಿಲ್ಲೆಯಾದ್ಯಂತ ಸತತ ಮಳೆಯಾಗುತ್ತಿದ್ದು, ಬೈಂದೂರು ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾರಾಪತಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಶಾಲೆಗೆ ರಜೆ ಇದ್ದ ಕಾರಣ ಯಾವುದೇ ತೊಂದರೆಯಾಗಿಲ್ಲ. ಇಲ್ಲಿಯ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ತೆರವುಗೊಳಿಸಬೇಕೆಂದು ಇಂಜಿನಿಯರ್ ವರದಿ ನೀಡಿದ್ದರೂ ಸಹ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಕೆಲವು ಸಮಯದ ಹಿಂದೆ ಈ ಕಟ್ಟಡದಲ್ಲಿ ತರಗತಿ ನಡೆಯುತ್ತಿತ್ತು. ಅಪಾಯ ಅರಿತ ಸ್ಥಳೀಯರು ಈ ಕಟ್ಟಡದಲ್ಲಿ ತರಗತಿ ನಡೆಸದಂತೆ ಶಿಕ್ಷಕರಿಗೆ ತಿಳಿಸಿದ್ದರು. ಇದೀಗ ಅಧಿಕಾರಿಗಳ ನಿರ್ಲಕ್ಷದಿಂದ ಇಂತಹ ಘಟನೆಗಳು ಸಂಭವಿಸುತ್ತಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ.





