ಕಾರ್ಕಳ: ಲಿಟ್ಸ್ ಏಂಜಲ್ಸ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ, ನಂದಳಿಕೆ ಗ್ರಾಮದ ಡಾ.ಪಿ.ಕೆ.ಶೆಟ್ಟಿ (78) ಅವರು ಮುಂಬೈನ ಸ್ವಗೃಹದಲ್ಲಿ ನಿಧನ ಹೊಂದಿದರು. ಮುಂಬೈಯ ಪಾನ್ಬೈ ಇಂಟರ್ನ್ಯಾಷನಲ್ ಸ್ಕೂಲ್, ಲಿಟ್ಸ್ ಏಂಜಲ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಂಬೈ, ರೆ. ಸಿ. ಎಫ್. ಆಂಡೋ ಇಂಗ್ಲೀಷ್ ಸ್ಕೂಲ್ ಮುಂಬೈ ಇದರ ಸಂಚಾಲಕರಾಗಿರುವ ಮೂಲತಃ ನಂದಳಿಕೆಯವರಾದ ಡಾ.ಪಿ.ಕೆ.ಶೆಟ್ಟಿ ತನ್ನೂರಿನಲ್ಲಿ ಸಿಬಿಎಸ್ಇ ಶಾಲಾ ತೆರೆಯಬೇಕೆಂಬ ನಿಟ್ಟಿನಲ್ಲಿ 2004ರಲ್ಲಿ ಕಾರ್ಕಳ ತಾಲೂಕಿನ ಬೆಳಣ್ನಲ್ಲಿ ಲಿಟ್ಸ್ ಏಂಜಲ್ಸ್ ಸ್ಕೂಲ್ ಪ್ರಾರಂಭಿಸಿದ್ದರು. ತದನಂತರ 2005ರಲ್ಲಿ ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾರಂಭಿಸಿದ್ದರು. ಶೈಕ್ಷಣಿಕ ಮಾತ್ರವಲ್ಲದೇ ಪಿ. ಕೆ.ಶೆಟ್ಟಿ ಅವರು ನಂದಳಿಕೆ ಲಕ್ಷ್ಮೀ ಜನಾರ್ದನ ದೇವಸ್ಥಾನದ ಟ್ರಸ್ಟಿಯಾಗಿ, ಮುಂಬೈ ಬಂಟ್ಸ್ ಸಂಘದ ಪದಾಧಿಕಾರಿಯಾಗಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಮೋಹಿನಿ ಶೆಟ್ಟಿ, ಪುತ್ರರಾದ ಮಯೂರ್ ಕುಮಾರ್ ಶೆಟ್ಟಿ, ಪಿಯೂಷ್ ಶೆಟ್ಟಿ, ವರುಣ್ ಶೆಟ್ಟಿ ಅವರನ್ನು ಅಗಲಿದ್ದಾರೆ. ಡಾ.ಪಿ. ಕೆ.ಶೆಟ್ಟಿ ನಿಧನಕ್ಕೆ ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಡಾ. ಪಿ.ಕೆ.ಶೆಟ್ಟಿ ಅವರು ಮುಂಬೈ ಮತ್ತು ಹುಟ್ಟೂರಿನಲ್ಲಿ ಶಾಲೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಅವರ ಅಗಲಿಕೆಯಿಂದ ಕಾರ್ಕಳ ಓರ್ವ ಶೈಕ್ಷಣಿಕ ಹರಿಕಾರನನ್ನು ಕಳೆದುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.



