ಅಂತಾರಾಜ್ಯಗಳಲ್ಲಿ ವಾಹನ ಹಾಗೂ ಸರಗಳ್ಳತನ ನಡೆಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಪೈಸಲ್ ಮತ್ತು ನಿತೀನ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 1,20,000 ರೂ. ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಿಸಿದ 45 ಸಾವಿರ ರೂ. ಮೌಲ್ಯದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿ.12ರಂದು ಯೆಯ್ಯಾಡಿಯ ಕಾಂಪ್ಲೆಕ್ಸೊಂದರ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಬೈಕ್ ಕಳವು ಆಗಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಕದ್ರಿ ಅಪರಾಧ ವಿಭಾಗದ ಸಿಬ್ಬಂದಿಗೆ ದೊರೆತ ಖಚಿತ ಮಾಹಿತಿಯಂತೆ ಡಿ.16ರಂದು ಪ್ರಕರಣದ ಪ್ರಮುಖ ಆರೋಪಿ ಪೈಸಲ್ ಅಲಿಯಾಸ್ ತೋಟ ಪೈಸಲ್ ಮತ್ತು ನಿತೀನ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ಡಿ.13ರಂದು ಭಟ್ಕಳ ಗ್ರಾಮಿಣ ಪೊಲೀಸ್ ಠಾಣಾ ಸರಹದ್ದಿನ ಗರ್ಡಿ ಹಿತ್ಲು ಬೆಳಕೆ ಎಂಬಲ್ಲಿ ವಯೋವೃದ್ಧೆ ಹೊನ್ನಮ್ಮ ಮಹಾದೇವ ನಾಯ್ಕ್ ಎಂಬವರ ಕುತ್ತಿಗೆಯಿಂದ ಚಿನ್ನದ ಚೈನ್‌ನ್ನು ಕಸಿದುಕೊಂಡು ಪರಾರಿಯಾದ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಬಾಯಿ ಬಿಟ್ಟಿದ್ದಾರೆ. ಆರೋಪಿಗಳಿಂದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಈಗಾಗಲೇ ವಿವಿಧ ಠಾಣೆಗಳಲ್ಲಿ ಪ್ರಕರಣ ಈಗಾಗಲೇ ದಾಖಲಾಗಿತ್ತು.



