ಜುಲೈ 29ರಂದು ವ್ಯಸನಮುಕ್ತ ಸಾಧಕರ ಸಮಾವೇಶ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಉಜಿರೆ ಶ್ರೀ ಧರ್ಮಸ್ಥಳಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರ ಆಶ್ರಯದಲ್ಲಿ ರಾಜ್ಯಾದ್ಯಂತ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಪಾನಮುಕ್ತರಾದ ನವಜೀವನ ಸದಸ್ಯರ ವ್ಯಸನಮುಕ್ತರ ಸಮಾವೇಶ ಜುಲೈ 29 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ. ಸಭಾಪತಿ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಶಾಸಕ ಹರೀಶ್ ಪೂಂಜ ವ್ಯಸನಮುಕ್ತ ಸಾಧಕರಿಗೆ ಸಮಾನ ಮಾಡಲಿದ್ದು, ವಿ.ಪ.ಸದಸ್ಯ ಕೆ. ಹರೀಶ್ ಕುಮಾರ್ ಗುರುತಿನ ಚೀಟಿ ವಿತರಿಸುವರು. ಕೆ. ಪ್ರತಾಪಸಿಂಹ ನಾಯಕ್ ಪ್ರಮಾಣ ಪತ್ರ ವಿತರಿಸುವರು. ಎಸ್.ಡಿ.ಎಂ.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾ ಪುಸ್ತಕ ಬಿಡುಗಡೆ ಮಾಡಲಿರುವರು. ಶ್ರೀ ಕ್ಷೇ.ಧ.ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥ್ ವಾರ್ಷಿಕ ವರದಿ ಬಿಡುಗಡೆ
ಮಾಡುವರು. ರಾಜ್ಯಾದ್ಯಂತ ವಿವಿಧ ತಾಲೂಕಿನಲ್ಲಿ ನಡೆದ ಮದ್ಯವರ್ಜನ ಶಿಬಿರಗಳ 1,733 ಮಂದಿ ವ್ಯಸನಮುಕ್ತರು ಮತ್ತು ಅವರ ಕುಟುಂಬಸ್ಥರು ಸೇರಿದಂತೆ 2,700 ಮಂದಿ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.



