ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ, ಕಾರ್ಮಿಕ ವರ್ಗ ಮತ್ತೆ ಗುಲಾಮಗಿರಿಯತ್ತ ಸಾಗಲಿದೆ ಎಂದು ಫಣೀಂದ್ರ ಕೆ ಎಚ್ಚರಿಸಿದ್ದಾರೆ.

ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಕಾಪಾಡಬೇಕಾದ ಕೇಂದ್ರ ಸರಕಾರವು ನಿತ್ಯ ನಿರಂತರವಾಗಿ ಕಾರ್ಪೊರೇಟ್‌ಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಆ ಮೂಲಕ ಕಾರ್ಪೊರೇಟ್ ಸರಕಾರವಾಗಿದೆ. ಹಸಿವು ಮುಕ್ತ, ಬಡತನ ಮುಕ್ತ, ನಿರುದ್ಯೋಗ ಮುಕ್ತ ಭಾರತವಾಗಿ ನಿರ್ಮಾಣ ಮಾಡುವ ಬದಲು ಯೂನಿಯನ್ ಮುಕ್ತ ಭಾರತವನ್ನಾಗಿ ನಿರ್ಮಿಸಲು ಹೊರಟಿದೆ. ಈ ಮೂಲಕ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮರನ್ನಾಗಿಸಿ ಅತ್ಯಂತ ಹೀನಾಯವಾಗಿ ಶೋಷಣೆ ಮಾಡಲು ಹೊರಟಿದೆ ಎಂದು ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ ಆಕ್ರೋಶ ವ್ಯಕ್ತಪಡಿಸಿದರು.

ಅವರು ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಫೆಬ್ರವರಿ 12ರ ಅಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ಆಯೋಜಿಸಲ್ಪಟ್ಟ ದ.ಕ.ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾದ ದ.ಕ.ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜರವರು ಮಾತನಾಡುತ್ತಾ, ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನೀಕರಣದ ಹೆಸರಿನಲ್ಲಿ ಸರ್ವನಾಶ ಮಾಡುವ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನು ಬಿಕ್ಕಟ್ಟಿಗೆ ಸಿಲುಕಿಸಲಾಗಿದೆ.

ವಿಮಾ ಕ್ಷೇತ್ರದಲ್ಲೂ 100%ದಷ್ಟು ವಿದೇಶಿ ನೇರ ಹೂಡಿಕೆಯನ್ನು ಮಾಡಿ ವಿದೇಶೀ ವಿಮಾ ಸಂಸ್ಥೆಗಳಿಗೂ ಮುಕ್ತ ಅವಕಾಶ ನೀಡಿದೆ ಎಂದು ಹೇಳಿದರು. ಬ್ಯಾಂಕ್ ನೌಕರರ ರಾಜ್ಯ ಮುಖಂಡರಾದ ಬಿ ಎಂ ಮಾಧವರವರು ಮಾತನಾಡಿ, ಕಳೆದ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ಅಂಬಾನಿ ಅದಾನಿಗಳು ಸೇರಿದಂತೆ ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡುವ ಮೂಲಕ ಇಡೀ ದೇಶವನ್ನೇ ಅಂಬಧಾನಿ ಮಾಡಲು ಹೊರಟಿದೆ ಸರಕಾರ ಎಂದು ಹೇಳಿದರು.



