ವಿಕಲಚೇತನರು ಸಮಾಜದಲ್ಲಿ ಸಮಾನವಾಗಿ ಪ್ರಗತಿ ಸಾಧಿಸಲು ಅವರಿಗೆ ಅರ್ಹವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹೀದ್ ತೆಕ್ಕಿಲ್ ತಿಳಿಸಿದರು.

ಅವರು ಶುಕ್ರವಾರ ಪದವಿನಂಗಡಿ ದೇವಿನಗರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಚೇತನರಿಗೆ ವಿವಿಧ ಉದ್ಯೋಗದಾತರ ಪ್ರಾಯೋಜಿತ ಯಾಂತ್ರಿಕ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಕಲಚೇತನರು ಸಮಾಜದಲ್ಲಿ ಯಾವುದೇ ಕೊರತೆಯಾಗದಂತೆ ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ವಿಕಲಚೇತನರ ಸೌಲಭ್ಯಗಳನ್ನು ವಿಳಂಬವಿಲ್ಲದೆ ನೀಡಬೇಕು.

ಇತರರಂತೆ ಅವರು ದುಡಿಯಲು ಹಾಗೂ ಸೇವೆಗೈಯಲು ಈ ಸೌಲಭ್ಯಗಳು ಪೂರಕವಾಗಬೇಕು ಎಂದು ಅವರು ಹೇಳಿದರು. ಕಾರ್ಮಿಕರ ಜೀವನ ಉನ್ನತವಾಗಿರಲು ಅವರಿಗೆ ಕನಿಷ್ಠ ವೇತನ ಒದಗಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದರು. ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ ಮಾತನಾಡಿ, ವಿಕಲಚೇತನರು ಸಮಾಜದಲ್ಲಿ ಮುಕ್ತವಾಗಿ ಸಂಚರಿಸಲು ಅವರಿಗೆ ತ್ರಿಚಕ್ರ ವಾಹನ ನೀಡುತ್ತಿರುವುದು ಶ್ಲಾಘನೀಯ.

ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯೊಂದಿಗೆ ಕೈಜೋಡಿಸಿದ ವಿವಿಧ ಉದ್ಯಮ, ಕೈಗಾರಿಕೆಗಳನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಹೊರಗುತ್ತಿಗೆಯಲ್ಲಿರುವ ಮಹಿಳಾ ನೌಕರರಿಗೆ ಹೊರಗುತ್ತಿಗೆ ಸಂಸ್ಥೆಗಳು ಮಾತೃತ್ವ ರಜೆ ಹಾಗೂ ಋತುಮತಿ ರಜೆಯನ್ನು ನೀಡಲು ನಿರಾಕರಿಸುತ್ತಿರುವ ಪ್ರಕರಣಗಳು ಕಂಡುಬಂದಿದ್ದು, ಅಂತಹ ಏಜೆನ್ಸಿಗಳ ವಿರುದ್ಧ ಕಾರ್ಮಿಕ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸದಾಶಿವ ಉಳ್ಳಾಲ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಕಾರ್ಖಾನೆಗಳ ಉಪನಿರ್ದೇಶಕ ರಾಜೇಶ್ ಮಿಶ್ರಿಕೋಟಿ, ಎಂ.ಆರ್.ಪಿ.ಎಲ್ ಆಡಳಿತ ಸಿಜಿಎಂ ಪ್ರಶಾಂತ್ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು. ಕಾರ್ಮಿಕ ಅಧಿಕಾರಿ ಕುಮಾರ್ ಸ್ವಾಗತಿಸಿದರು, ವಿಲ್ಮಾ ಎಲಿಜಬೆತ್ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 90 ತ್ರಿಚಕ್ರ ಸ್ಕೂಟರ್ ವಿತರಿಸಲಾಯಿತು.



