ನಿರ್ಮಾಣ ಹಂತದ ಗೋಡೆ ಕುಸಿದು 7 ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ ಗುರುಗ್ರಾಮ್ ಜಿಲ್ಲೆಯಲ್ಲಿ ನಡೆದಿದೆ.

ಗುರುಗ್ರಾಮ್‌ನ ಸಿಧ್ಯಾವಲಿ ಗ್ರಾಮದ ಬಳಿ ಇರುವ `ಸಿನ್ನೇಚರ್ ಗ್ಲೋಬಲ್ ಸೊಸೈಟಿ’ ವಸತಿ ಯೋಜನೆಯ ನಿರ್ಮಾಣ ಸ್ಥಳದಲ್ಲಿ ಈ ದುರ್ಘಟನೆ ನಡೆದಿದ್ದು, ಒಳಚರಂಡಿ ಸಂಸ್ಕರಣಾ ಘಟಕದ ಕಾಮಗಾರಿ ನಡೆಯುತ್ತಿದ್ದಾಗ ಮಣ್ಣು ಕುಸಿದು ಕಾಂಕ್ರೀಟ್ ಗೋಡೆ ಬಿತ್ತು. ಇದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 12 ರಿಂದ 15 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಮೃತರನ್ನು ಸತೀಶ್, ಭಾಗೀರಥ್, ಮಿಲನ್, ಶಿವ ಶಂಕರ್, ಮಂಗಲ್ ಮತ್ತು ಪರಮೇಶ್ವರ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಕಾರ್ಮಿಕನ ಗುರುತು ಪತ್ತೆ ಆಗಿಲ್ಲ. ಗಾಯಗೊಂಡಿರುವ ಐವರು ಕಾರ್ಮಿಕರನ್ನು ಚಿಕಿತ್ಸೆಗಾಗಿ ರಾಜಸ್ಥಾನದ ಭಿವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.



