ಸಾರಿಗೆ ಬಸ್‌ನಲ್ಲಿ ಮಹಿಳೆಯೊಬ್ಬರು ತಮ್ಮ ಚಿನ್ನದ ಸರ ಕಳ್ಳತನವಾಗಿದೆ ಎಂದು ಇಡೀ ಸಾರಿಗೆ ಬಸ್ಸನ್ನೇ ಪೊಲೀಸ್ ಠಾಣೆಗೆ ಕರೆತಂದಿರುವ ಕುತೂಹಲಕಾರಿ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದಿದೆ.

ಹಿರೇಬಾಸೂರು ಗ್ರಾಮದ ನಿವಾಸಿ ಮೀನಾಕ್ಷಿ ಕಾಗಿನೆಲೆ ಎಂಬುವವರು ಚಿನ್ನದ ಸರ ಕಳೆದುಕೊಂಡ ಮಹಿಳೆ. ಇವರು ಅಡವಿಟ್ಟಿದ್ದ ಸುಮಾರು 10 ಗ್ರಾಂ ಚಿನ್ನದ ಸರವನ್ನು ಬಿಡಿಸಿಕೊಂಡು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಹಾವೇರಿ ಬಸ್ ನಿಲ್ದಾಣದಲ್ಲಿ ಅವರ ಚಿನ್ನದ ಸರ ಕಳ್ಳತನವಾಗಿದೆ. ಸರ ಕಳೆದುಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಗಾಬರಿಗೊಂಡ ಮಹಿಳೆ, ಕಳ್ಳ ಬಸ್ಸಿನಲ್ಲೇ ಇರಬಹುದು ಎಂಬ ಅನುಮಾನದಿಂದ ಚಾಲಕ ಮತ್ತು ನಿರ್ವಾಹಕರಿಗೆ ವಿಷಯ ತಿಳಿಸಿ, ಪ್ರಯಾಣಿಕರ ಸಮೇತ ಬಸ್ಸನ್ನು ನೇರವಾಗಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಬಳಿಕ ಬಸ್ಸು ಠಾಣೆಗೆ ಬರುತ್ತಿದ್ದಂತೆಯೇ ಪೊಲೀಸರು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ತಪಾಸಣೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.



