ಸಂಚಾರ ನಿಯಮ ಉಲ್ಲಂಘಿಸಿದವನಿಗೆ ನ್ಯಾಯಾಲಯದಿಂದ ವಿನೂತನ ಶಿಕ್ಷೆ ವಿಧಿಸಲಾಗಿದೆ. 15 ದಿನಗಳ ಕಾಲ `ಸಮುದಾಯ ಸೇವೆ’ಗೆ ಆದೇಶ ಮಾಡಲಾಗಿದೆ. ಪದೇ ಪದೇ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿದ್ದ ಸವಾರನೊಬ್ಬನಿಗೆ ಸುಳ್ಯದ ನ್ಯಾಯಾಲಯವು ದಂಡದ ಜೊತೆಗೆ ಸಾರ್ವಜನಿಕವಾಗಿ ಸಂಚಾರ ನಿಯಮಗಳ ಅರಿವು ಮೂಡಿಸುವ ವಿಶಿಷ್ಟ ಶಿಕ್ಷೆಯನ್ನು ವಿಧಿಸಿದೆ.

ಸುಳ್ಯ ನಿವಾಸಿ ರಕ್ಷಿತ್ ಜಿ. ಎಂಬುವವರು ಸುಳ್ಯ ಪೇಟೆಯಲ್ಲಿ ಸಂಚಾರ ನಿಯಮಗಳನ್ನು ಸತತವಾಗಿ ಉಲ್ಲಂಘಿಸಿದ್ದರು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿ.ಪಿ. ಅವರು ಐಎಂವಿ ಕಾಯ್ದೆಯಡಿ ಮೂರು ಪ್ರತ್ಯೇಕ ಲಘು ಪ್ರಕರಣಗಳನ್ನು ದಾಖಲಿಸಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಳ್ಯದ ಮಾನ್ಯ ಎಸ್.ಸಿ.ಜೆ. ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಎರಡು ಪ್ರಕರಣಗಳಲ್ಲಿ ಒಟ್ಟು 3,000 ರೂಪಾಯಿ ದಂಡ ವಿಧಿಸಿದೆ. ಸಮುದಾಯ ಸೇವೆ ಎಂಬುದು ಈ ತೀರ್ಪಿನ ವಿಶೇಷತೆಯಾಗಿದ್ದು, ಆರೋಪಿಯು ಒಟ್ಟು ಮೂರು ಪ್ರಕರಣಗಳಲ್ಲಿ ತಲಾ 5 ದಿನಗಳಂತೆ ಒಟ್ಟು 15 ದಿನಗಳ ಕಾಲ ಸುಳ್ಯ ಪೇಟೆಯ ಪ್ರಮುಖ ಜಂಕ್ಷನ್ಗಳಲ್ಲಿ ನಿಂತು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು.

‘ಜಾಗೃತಿ ಫಲಕ ಹಿಡಿಯಬೇಕು: ಶಿಕ್ಷೆಯ ಅವಧಿಯಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸುವ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ನ್ಯಾಯಾಲಯ ಸೂಚಿಸಿದೆ. ಜೊತೆಗೆ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತಿನಲ್ಲಿಡಲು ಆದೇಶಿಸಲಾಗಿದೆ. ಸಂಚಾರ ನಿಯಮಗಳನ್ನು ಮೀರುವವರಿಗೆ ಈ ತೀರ್ಪು ಒಂದು ಎಚ್ಚರಿಕೆಯ ಸಂದೇಶವಾಗಿದ್ದು, ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.



