ಮಂಗಳೂರು: ಹಳ್ಳದ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಗಳೂರು ನಗರದ ಪಡೀಲ್ ಅಳಪೆ ಪಡ್ಪು ರೈಲ್ವೇ ಬ್ರಿಡ್ಜ್ ಸಮೀಪ ನಡೆದಿದೆ. ಅಳಪೆ ಪಡುರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಮೃತಪಟ್ಟ ಯುವಕರು.


ಭಾನುವಾರ ರಜೆಯಂದು ಒಟ್ಟು ಆರು ಜನ ಸ್ನೇಹಿತರು ಮುಗುಡು ಮೀನು ಹಿಡಿಯಲು ಅಳಪೆ ಪಡ್ಪು ಬಳಿಯ ಕೆರೆಗೆ ತೆರಳಿದ್ದರು.
ಅಷ್ಟರಲ್ಲಿ ವೀಕ್ಷಿತ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ವರುಣ್ ಆತನನ್ನು ರಕ್ಷಿಸಲು ತಾನೂ ಇಳಿದು ನೀರುಪಾಲಾಗಿದ್ದಾನೆ. ತಕ್ಷಣ ಇತರ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಂಕನಾಡಿ ನಗರ ಠಾಣಾ ಪೊಲೀಸರು, ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಹುಡುಕುವ ಕಾರ್ಯಾಚರಣೆ ನಡೆಸಿದ್ದು, ಸ್ಥಳೀಯರ ಸಹಕಾರದೊಂದಿಗೆ ತುಂಬಾ ಹೊತ್ತು ಹುಡುಕಾಡಿ ಕೊನೆಗೂ ಮೃತದೇಹಗಳನ್ನು ಮೇಲಕ್ಕೆ ತಂದಿದ್ದಾರೆ.
ವರುಣ್ ವೃತ್ತಿಯಲ್ಲಿ ಚಾಲಕನಾಗಿದ್ದರು. ವೀಕ್ಷಿತ್ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ವೀಕ್ಷಿತ್ ಅವರಿಗೆ ತಂದೆ-ತಾಯಿ ಹಾಗೂ ಒಬ್ಬ ಸಹೋದರ ಇದ್ದಾರೆ. ವರುಣ್ ಅವರಿಗೂ ತಂದೆ-ತಾಯಿ ಹಾಗೂ ತಮ್ಮ ಇದ್ದಾನೆ. ಇಬ್ಬರು ಯುವಕರು ಕ್ರೀಯಾಶೀಲರಾಗಿದ್ದು, ಮನೆಯ ಆಧಾರ ಸ್ತಂಭವಾಗಿದ್ದರು. ಇವರ ನಿಧನಕ್ಕೆ ಶಾಸಕ ವೇದವ್ಯಾಸ ಕಾಮತ್ ಕೂಡಾ ಫೇಸ್ ಬುಕ್ ನಲ್ಲಿ ಸಂತಾಪ ವ್ಯಕ್ಯಪಡಿಸಿದ್ದಾರೆ.



