ಪೆರ್ಲ : ಚೆರ್ಕಳ —ಕಲ್ಲಡ್ಕ ಅಂತರಾಜ್ಯ ರಸ್ತೆಯ ಅಡ್ಕಸ್ಥಳ ಎಂಬಲ್ಲಿನ ಸೇತುವೆ ಬಳಿಕ ಗುರುವಾರ ತಡರಾತ್ರಿ ಅಪಘಾತಕ್ಕೀಡಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿದ್ದ ಮಣಿಯಂಪಾರೆ ಸಮೀಪದ ಮಣ್ಣಂಗಳ ನಿವಾಸಿ ನೀರೋಳ್ಯದ ಜಾನು ನಾಯ್ಕ್ ಎಂಬವರ ಪುತ್ರ ರೋಶನ್ (27) ಶುಕ್ರವಾರ ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸಿದೆ ಸಾವನ್ನಪ್ಪಿದರು ಎಂದು ವರದಿಯಾಗಿದೆ.

ಇಂಜಿನೀಯರಿಂಗ್ ಪದವಿ ಗಳಿಸಿಕೊಂಡಿದ್ದ ಈತ ಮನೆಯಲ್ಲಿಯೇ ವಿದೇಶ ಕಂಪೆನಿಯೊಂದಕ್ಕೆ ವರ್ಕ್ ಫ್ರಂ ಹೋಮ್ ಕೆಲಸ ನಿರ್ವಹಿಸುತ್ತಿದ್ದ. ಈ ನಡುವೆ ಗುರುವಾರ ಮಂಗಳೂರಿನಲ್ಲಿ ಖಾಸಗೀ ಕಂಪೆನಿಯೊಂದರಲ್ಲಿ ಉದ್ಯೋಗ ನೇಮಕದ ನಿಮಿತ್ತ ಇಂಟರ್ ವ್ಯೂಗೆ ತನ್ನ ಸ್ವಂತ ಕಾರಿನಲ್ಲಿ ತೆರಳಿದ್ದು ಸಂಜೆ ಮರಳುವ ವೇಳೆ ವಿಟ್ಲದಲ್ಲಿ ತನ್ನ ಚಿಕ್ಕಪ್ಪನ ಮಡದಿ ಪ್ರಸವಿಸಿದ್ದನ್ನರಿತು ತಾಯಿ ಮಗುವನ್ನು ನೋಡಿ ಆದ ಬಳಿಕ ಮನೆಗೆ ಮರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಡ್ಕಸ್ಥಳ ಸೇತುವೆಯ ಬದಿಯಲ್ಲಿನ ಆರು ಫಿಲ್ಲರ್ ಗಳಿಗೆ ಬಡಿದುಕೊಂಡು ಬಂದ ಕಾರು ಸ್ಕಿಡ್ಡಾಗಿ ರಸ್ತೆಯಲ್ಲಿಯೇ ಪಲ್ಟಿಯಾಗಿ ಮಗುಚಿ ಬಿದ್ದಿತ್ತು. ತಡ ರಾತ್ರಿಯಾದ ಕಾರಣ ಅಪಘಾತ ಯಾರ ಅರಿವಿಗೂ ಬಾರದಿದ್ದು ಕಾರಿನೊಳಗೆಯೇ ಸಿಲುಕಿದ್ದ ರೋಶನ್ ರಕ್ತಸ್ರಾವವಾಗಿ ಚಿಂತಾಜನಕ ಸ್ಥಿತಿಯಲ್ಲಿ ಹಲವು ಗಂಟೆ ಕಳೆದಿದ್ದ. ಬಳಿಕ ರಾತ್ರಿ ಗಸ್ತು ತಿರುಗುವ ಬದಿಯಡ್ಕ ಠಾಣಾ ಪೊಲಿಸರು ಈ ಸ್ಥಳದ ಮೂಲಕ ಹಾದು ಹೋಗುವಾಗಲಷ್ಟೆ ವಿಷಯ ಗಮನಕ್ಕೆ ಬಂದಿತ್ತು. ತಕ್ಷಣ ಪೋಲಿಸರು ಸಮೀಪವಾಸಿಗಳನ್ನೆಬ್ಬಿಸಿ ಅವರ ಸಹಾಯದಿಂದ ರೋಶನ್ ನನ್ನು ಹೊರ ತೆಗೆಯಲು ಗಂಟೆಗಳ ಪ್ರಯತ್ನ ನಡೆಸಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಬಲವಾದ ಹೊಡೆತ ಬಿದ್ದ ಕಾರಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈತನ ಚಿಕಿತ್ಸೆಯ ಬಗ್ಗೆ 24 ಗಂಟೆಗಳ ಅವಧಿ ನೀಡಲಾಗಿತ್ತು. ಆದರೆ ಪ್ರಜ್ಞೆ ಮರುಕಳಿಸದೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಅಪಘಾತ ಸಂಭವಿಸಿದ ತಕ್ಷಣ ಉಂಟಾದ ತಲೆಯೊಳಗೆ ಉಂಟಾದ ಅಧಿಕ ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದು ವೈದಾಧಿಕಾರಿಗಳು ತಿಳಿಸಿದ್ದರು. ವಿಧಿ ಕಸಿದದ್ದು ಮನೆಯ ಏಕ ಗಂಡು ಸಂತಾನವನ್ನು….ದೂರವಾಣಿ ಸಂಪರ್ಕ ಕೇಂದ್ರೀಯ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದ ನೀರೋಳ್ಯ ಜಾನು ನಾಯ್ಕ- ಸರಸ್ವತಿ ದಂಪತಿಗಳ ಎರಡು ಹೆಣ್ಣುಮಕ್ಕಳಲ್ಲಿ ಈತ ಏಕಮಾತ್ರ ಪುತ್ರನಾಗಿದ್ದ. ಈತನ ಸಹೋದರಿ ರಾಜಶ್ರೀ ಹತ್ತು ವರ್ಷಗಳ ಹಿಂದೆ ಉಡುಪಿಯಲ್ಲಿ ವಿದ್ಯಾಭ್ಯಾಸಗೈಯುತ್ತಿರುವ ಸಂದರ್ಭ ರಸ್ತೆ ದಾಟುತ್ತಿದ್ದ ವೇಳೆ ರಸ್ತೆ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ಇದೀಗ ಮತ್ತೊಂದು ಇಂತಹದೆ ದುರಂತ ಈ ಕುಟುಂಬವನ್ನು ಬೇಟೆಯಾಡಿರುವುದು ಶೋಕ ಸಾಗರ ಸೃಷ್ಠಿಸಿದೆ. ಎರಡು ವರ್ಷಗಳ ಹಿಂದೆಯಷ್ಟೆ ವಿವಾಹಿತನಾಗಿದ್ದ ಈತ ತಾಯಿ ಸರಸ್ವತಿ, ಪತ್ನಿ ಸಂಜನಾ, ಒಂದೂವರೆ ವರ್ಷದ ಮಗಳು ವಿಹಾ, ಸಹೋದರಿರಾದ ರಜಿಶಾ, ರವಿನಾ ಎಂಬವರನ್ನಗಲಿದ್ದಾರೆ. ಓಚ್ಚು ಇನ್ನು ನೆನಪು ಮಾತ್ರ….. ರೋಶನ್ ಎಂಬ ಅಧಿಕೃತ ದಾಖಲೆಯ ಹೆಸರನ್ನು ಹೊಂದಿದ್ದರು ಜನರು ಪ್ರೀತಿಯಿಂದ ಓಚ್ಚು ಎಂಬುದಾಗಿ ಕರೆಯುತ್ತಿದ್ದರು. ನಾಡಿನಲ್ಲಿ ಎಲ್ಲರೊಡನೆ ಬಹಳ ಆತ್ಮೀಯವಾಗಿ ವರ್ತಿಸುತ್ತಿದ್ದ ಈತ ಅಪಾರ ಬಂಧು ಬಳಗವನ್ನು ಹೊಂದಿದ್ದ. ಈಗ ಆಧುನಿಕ ತಲೆಮಾರಿನ ಯುವಕರಂತೆ ಐಟಿ ಬಿಟಿ ಕೆಲಸಕ್ಕೆ ಆಸೆ ಪಡದೆ ಈತ ಮನೆಯಿಂದ ಕಂಪೆನಿಯೊಂದಕ್ಕೆ ವರ್ಕ್ ಪ್ರಂ ಹೋಮ್ ಕೆಲಸ ನಿರ್ವಹಿಸುವ ನಡುವೆ ಮನೆಯವರ ಜತೆಗೂಡಿ ಹೈನುಗಾರಿಕೆ, ಕೃಷಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ.ನಿತ್ಯವೂ ಶೇಣಿ ಹಾಲುತ್ಪಾದಕ ಸಂಘಕ್ಕೆ ಹಾಲು ತರುತ್ತಿದ್ದ. ಎಲ್ಲಾ ಜಾತಿ ಮತದರಲ್ಲೂ ಏಕಭಾವದೊಂದಿ ಬಹಳ ಗೌರವ ಹಾಗೂ ಆಪ್ತಭಾವದಿಂದಿರುತ್ತಿದ್ದ ಈತನ ಅಗಲುವಿಕೆಯಿಂದ ನಾಡು ಶೋಕತಪ್ತವಾಗಿದೆ. ಈತನ ಅಗಲುವಿಕೆಗೆ ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಪಂ.ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ, ಬ್ಲೋಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ.ಟೀಮ್ ಛತ್ರಪತಿ ಮಣಿಯಂಪಾರೆ ಸಂತಾಪ ವ್ಯಕ್ತಪಡಿಸಿದ್ದಾರೆ.



