ದಕ್ಷಿಣ ಕನ್ನಡ : ಮೊದಲು ಕರ್ನಾಟಕದ ಕೆಲವೆಡೆ ಕಂಡು ಬಂದಿದ್ದ ಮದ್ರಾಸ್ ಅಥವಾ ಕೆಂಗಣ್ಣು ಪ್ರಕರಣಗಳು ರಾಜ್ಯಾದ್ಯಂತ ವಿಸ್ತರಿಸುವ ಲಕ್ಷಣಗಳು ಕಂಡು ಬರುತ್ತಿರುವೆ. ಕಳೆದ ಒಂದು ವಾರದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಕಣ್ಣಿನ ಸಮಸ್ಯೆಯ ಪ್ರಕರಣಗಳು ವರದಿ ಆಗಿವೆ ಎಂಬ ಮಾಹಿತಿ ಲಭ್ಯವಾಗಿದೆ.ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಜುಲೈ 25 ಮತ್ತು ಆಗಸ್ಟ್ 4 ರ ನಡುವೆ ಕೇವಲ ಒಂದು ವಾರದಲ್ಲಿ 40 ಸಾವಿರಕ್ಕೂ ಮಿಕ್ಕಿ ಕಣ್ಣಿನ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿವೆ.

ಪತ್ತೆಯಾದ ಪ್ರಕರಣಗಳಲ್ಲಿ ಕೆಂಗಣ್ಣು ಪ್ರಕರಣವೇ ಜಾಸ್ತಿ ಎಂಬುದು ಆರೋಗ್ಯ ಇಲಾಖೆಯ ಅಭಿಪ್ರಾಯ. ಇನ್ನೂ ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾದ ಪೈಕಿ ಜಿಲ್ಲಾವಾರು ಮಾಹಿತಿ ನೋಡುವುದಾದರೆ, ಬೀದರ್ ಜಿಲ್ಲೆಯಲ್ಲಿ 7,693, ರಾಯಚೂರಲ್ಲಿ 6,493, ಹಾವೇರಿಯಲ್ಲಿ 6,558, ಶಿವಮೊಗ್ಗದಲ್ಲಿ 3,410, ಹಾಗೂ ವಿಜಯನಗರ ಜಿಲ್ಲೆಯಲ್ಲಿ 2,201 ಪ್ರಕರಣಗಳು ಪತ್ತೆಯಾಗಿವೆ.ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಾದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕ್ರಮವಾಗಿ 146 ಮತ್ತು 192 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಬೆಂಗಳೂರಿನ ನೇತ್ರಶಾಸ್ತ್ರಜ್ಞರು ಹೇಳುವ ಪ್ರಕಾರ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಬೆಂಗಳೂರಿನಲ್ಲಿಯೂ ಸಹ ಪ್ರಕರಣಗಳು ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಇದೊಂದು ರೀತಿಯಲ್ಲಿ ಸಾಂಕ್ರಾಮಿಕವಾಗಿ ಕಾಡಲಿದೆ.
ಕಳೆದ ಎರಡು ವಾರಗಳಲ್ಲಿ ನಾವು ಮಿಂಟೋ ಆಸ್ಪತ್ರೆಯಲ್ಲಿಯೇ 400 ಕಾಂಜಂಕ್ಟಿವಿಟಿಸ್ ಪ್ರಕರಣಗಳು ದಾಖಲಾಗಿವೆ. ನಿತ್ಯ ಕನಿಷ್ಠ 30 ಪ್ರಕರಣಗಳನ್ನು ನೋಡುತ್ತಿದ್ದೇವೆ. ಆಸ್ಪತ್ರೆಯಲ್ಲಿರುವ 33 ವೈದ್ಯರಲ್ಲಿ ಆರು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಮಾಹಿತಿ ನೀಡಿದರು.ಈ ಮುಂಗಾರು ಮಳೆ ಅಧಿಕ ವಿರುವ ಜುಲೈ, ಆಗಸ್ಟ್ ಋತುವಿನಲ್ಲಿ ಈ ಕಣ್ಣಿನ ಸಮಸ್ಯೆ ಮತ್ತು ಏರಿಕೆ ಅಸಾಮಾನ್ಯವಾಗಿದೆ. ‘ಮದ್ರಾಸ್ ಐ’ ಕಣ್ಣು ಅಥವಾ ಕೆಂಪು ಕಣ್ಣು ಸಾಮಾನ್ಯವಾಗಿ ಪರಾಗದ ಅಲರ್ಜಿಯಿಂದ ಬೇಸಿಗೆಯ ತಿಂಗಳಲ್ಲಿ ಕಂಡು ಬರುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಬ್ಲೀಚ್-ಸಂಬಂಧಿತ ಕಾಂಜಂಕ್ಟಿವಿಟಿಸ್ ಸಹ ಸಾಮಾನ್ಯವಾಗಿರುತ್ತದೆ.
ಇನ್ನೂ ನೋಣಗಳು ಸಹ ಈ ಅನಾರೋಗ್ಯ ಕಾರಣವಾಗಿವೆ. ಆದರೆ ಮುಂಗಾರು ಋತುವಿನಲ್ಲಿ ಅನಿರೀಕ್ಷಿತವಾಗಿ ಈ ಸೋಂಕು ವ್ಯಾಪಿಸುತ್ತಿದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜಾಗರೂಕತೆಯಿಂದ ಇರುವಂತೆ, ಆರೋಗ್ಯ ಇಲಾಖೆ ತಿಳಿಸಿದೆ.



