ಸುಳ್ಯ: 11 ವರ್ಷ ಕಳೆದರೂ ನ್ಯಾಯ ಸಿಗದ ಸೌಜನ್ಯ ಕುಟುಂಬದ ನೋವಿಗೆ, ಆಕೆಗಾದ ಅನ್ಯಾಯಕ್ಕೆ ಸಾವಿರಾರು ಜನರಿಂದ ಸ್ಪಂದನೆ. ಸೌಜನ್ಯಳ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿ ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿಯ ವತಿಯಿಂದ ಬೃಹತ್ ಹಕ್ಕೊತ್ತಾಯ ಸಭೆ ಸುಳ್ಯದಲ್ಲಿ ನಡೆಯಿತು.

ಬೆಳ್ತಂಗಡಿ ಸೌಜನ್ಯ ಹತ್ಯೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂಬ ಕೂಗು ಸುಳ್ಯದಲ್ಲಿ ಯೂ ಕೇಳಿಬಂದಿದ್ದು ಇಂದು ಬೃಹತ್ ವಾಹನ ಜಾಥಾ ಹಾಗೂ ಬೃಹತ್ ಸಭೆಗೆ ಚಾಲನೆ ನೀಡಲಾಯಿತು. ನಿಂತಿಕಲ್ಲಿನಿಂದ ಹೊರಟ ಜಾಥಾದಲ್ಲಿ ವಾಹನ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದರು. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಜಾಥಾಕ್ಕೆ ಜಾಲನೆ ನೀಡಿದರು. ಈ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಸಹೋದರಿಯರು, ಸಹೋದರ ತಂದೆ ಉಪಸ್ಥಿತರಿದ್ದರು.

ಸೌಜನ್ಯಳ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿ ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿಯ ವತಿಯಿಂದ ಬೃಹತ್ ಹಕ್ಕೊತ್ತಾಯ ಸಭೆ ಸುಳ್ಯದಲ್ಲಿ ನಡೆಯಿತು. ಸೌಜನ್ಯ ತಾಯಿ ಕುಸುಮಾವತಿ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ ‘ಸೌಜನ್ಯ ಕೊಲೆಯ ನೈಜ ಆರೋಪಿಗಳನ್ನು ಬಂಧಿಸಬೇಕು. ಇದು ಸತ್ಯ ಹಾಗೂ ನ್ಯಾಯಕ್ಕಾಗಿ ನಡೆಸುವ ಹೋರಾಟ. ನ್ಯಾಯ ಸಿಗುವ ತನಕ ರಾಜ್ಯ ವ್ಯಾಪ್ತಿ ಹೋರಾಟ ನಡೆಸುವುದಾಗಿ ಹೇಳಿದರು.

ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ ನಾನು ನನ್ನ ಮಗಳಿಗೆ ನ್ಯಾಯ ಕೇಳುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನನಗೆ ನ್ಯಾಯ ಕೊಡಿಸಲು ಸಹಕರಿಸಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಿದರು. ಸೌಜನ್ಯ ಕುಟುಂಬಸ್ಥರು ಭಾಗವಹಿಸಿದ್ದರು. ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿಯ ಸಂಚಾಲಕ ಎನ್.ಟಿ.ವಸಂತ, ಅಜಿತ್ ಐವರ್ನಾಡು, ಜಿ.ಪಂ.ಮಾಜಿ ಸದಸ್ಯೆ ಸರಸ್ವತಿ ಕಾಮತ್, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಟಾರ್ ಮತ್ತಿತರರು ವೇದಿಕೆಯಲ್ಲಿ ಇದ್ದರು. ನಿಂತಿಕಲ್ಲಿನಿಂದ ಸುಳ್ಯಕ್ಕೆ ವಾಹನ ಜಾಥಾ ಮೂಲಕ ಆಗಮಿಸಿ ಬಳಿಕ ಸುಳ್ಯ ನಗರದಲ್ಲಿ ಕಾಲ್ನಡಿಗೆ ಯಾತ್ರೆ ನಡೆಯಿತು. ಹಕ್ಕೊತ್ತಾಯ ಸಭೆಯ ಬಳಿಕ ಸೌಜನ್ಯ ಪ್ರಕರಣದ ಮರು ತನಿಖೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
11 ವರ್ಷಗಳು ಕಳೆದರೂ ನ್ಯಾಯ ಸಿಗದೆ ಒದ್ದಾಡುತ್ತಿರುವ ಸೌಜನ್ಯಾ ಕುಟುಂಬಸ್ಥರ ನೋವಿಗೆ ಸಾಕ್ಷಿಯಾಗಿ ನಿಂತಿಕಲ್ಲು ಜಂಕ್ಷನ್‌ನಿಂದ ಸುಳ್ಯ ತನಕ ನಡೆದ ವಾಹನ ಜಾಥಾದಲ್ಲಿ ನೂರಾರು ವಾಹನಗಳು ಪಾಲ್ಗೊಂಡವು. ಸುಳ್ಯ ನಗರದಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.



