ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಭೂತಾನ್‌ನಿಂದ ಅಡಿಕೆ ಆಮದಿಗೆ ಒಪ್ಪಿಗೆ ನೀಡಿದೆ. ಅಲ್ಲದೆ ಅಡಿಕೆಗೆ ನಿಗದಿಯಾಗಿದ್ದ ಕನಿಷ್ಠ ಆಮದು ಬೆಲೆಯನ್ನ ಇಲ್ಲವಾಗಿಸಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.

ದೇಶೀ ಅಡಿಕೆಗೆ ಮನ್ನಣೆ ಸಿಗಬೇಕೆಂಬ ದೃಷ್ಟಿಯಲ್ಲಿ ವಿದೇಶದಿಂದ ಭಾರತಕ್ಕೆ ಆಮದಾಗುವ ಅಡಿಕೆಗೆ ಕನಿಷ್ಠ ಆಮದು ಬೆಲೆ ನಿಗದಿಪಡಿಸಲಾಗಿತ್ತು. ಆದರೆ, ಈ ನಿಯಮ ಉಲ್ಲಂಘಿಸಿ ಭೂತಾನ್‌ನಿಂದ ಆಮದು ಬೆಲೆ ವಿಧಿಸದೆ ಅಡಿಕೆ ಆಮದಿಗೆ ಒಪ್ಪಿಗೆ ನೀಡಿರುವುದು ಪ್ರಸ್ತುತ ಸಂಕಷ್ಟಕ್ಕೆ ಕಾರಣ . ಇದು ಹಲವು ಅಡ್ಡ ಪರಿಣಾಮ ಸೃಷ್ಟಿಸುವ ಭೀತಿ ಉಂಟಾಗಿದೆ. ಈ ಹಿಂದೆ ಇತರ ರಾಷ್ಟ್ರಗಳಿಂದ ಇದೇ ರೀತಿ ಆಮದು ಮಾಡಿ ಅಡಿಕೆ ಮಾರುಕಟ್ಟೆಯಲ್ಲಿ ದೇಶೀಯ ಅಡಿಕೆ ಧಾರಣೆ ಪಾತಾಳಕ್ಕೆ ಕುಸಿದಿತ್ತು. ಅಂತಹ ಸ್ಥಿತಿ ಮತ್ತೊಮ್ಮೆ ಉಂಟಾಗುವ ಆತಂಕ ರೈತರದ್ದಾಗಿದೆ.

ಕೂಡಲೇ ಈ ಆದೇಶವನ್ನು ಹಿಂಪಡೆದು ಬೆಳೆಗಾರರ ಹಿತ ಕಾಪಾಡಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಜೊತೆಗೆ ಇದನ್ನೇ ನೆಪವಾಗಿಟ್ಟುಕೊಂಡು ಮಧ್ಯವರ್ತಿಗಳು ಬೆಲೆ ಕಡಿಮೆ ಮಾಡಲು ಯತ್ನಿಸುತ್ತಾರೆ. ಸರ್ಕಾರ ಮತ್ತು ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಅನ್ಯಾಯ ತಡೆಯಲಿ. ಷರತ್ತು ವಿಧಿಸಿ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲಿ ಎಂಬುದು ರೈತರ ಬೇಡಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟಾರೆ 4.20 ಲಕ್ಷ ಹೆಕ್ಟೇರ್ ಅಡಿಕೆ ಪ್ರದೇಶವಿದೆ. ದೇಶದ ಅಡಿಕೆ ಉತ್ಪಾದನೆಯ ಶೇ.35ಕ್ಕೂ ಹೆಚ್ಚು ಅಡಿಕೆಯನ್ನು ಕರ್ನಾಟಕ ರಾಜ್ಯದಿಂದಲೇ ಉತ್ಪಾದಿಸಲಾಗುತ್ತಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಅಡಿಕೆ ಉತ್ಪಾದನೆಯು ಶೇ.30 ರಷ್ಟು ಹೆಚ್ಚಿದೆ’ ಎಂದು ಮಾರುಕಟ್ಟೆ ತಜ್ಞರು ಮಾಹಿತಿ ನೀಡಿದ್ದಾರೆ



