ವಿಟ್ಲ: ರಸ್ತೆಗೆ ಅಡ್ಡ ಬಂದ ಮುಂಗುಸಿಯನ್ನೂ ಉಳಿಸಲು ಹೋಗಿ ರಿಕ್ಷಾ ಪಲ್ಟಿ ಹೊಡೆದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೊಡಂಗಾಯಿ ಎಂಬಲ್ಲಿ ನಡೆದಿದೆ. ಈ ಘಟನೆಯಲ್ಲಿ ಆಟೋ ಚಾಲಕ ಮಂಗಲಪದವು ನಿವಾಸಿ ಇಸ್ಮಾಯಿಲ್ (53) ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ ವಿಟ್ಲದಿಂದ ಸಾಲೆತ್ತೂರು ಕಡೆಗೆ ಪ್ರಯಾಣಿಕರನ್ನು ಬಿಟ್ಟು ಮತ್ತೆ ವಿಟ್ಲಕ್ಕೆ ಹಿಂತಿರುಗುತ್ತಿದ್ದಾಗ ಕೊಡಂಗಾಯಿ ಸಮೀಪ ಮುಂಗುಸಿಯೊಂದು ಅಡ್ಡಬಂದಿದೆ. ವೇಗವಾಗಿ ಚಲಿಸುತ್ತಿದ್ದ ರಿಕ್ಷಾ ಚಾಲಕ ಮುಂಗುಸಿಯ ಪ್ರಾಣ ಉಳಿಸಲು ಹಠಾತ್ ಬ್ರೇಕ್ ಹಾಕಿದ್ದಾರೆ. ತಕ್ಷಣ ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಅಪ್ಪಳಿಸಿದೆ.
ಘಟನೆಯಲ್ಲಿ ಚಾಲಕ ಇಸ್ಮಾಯಿಲ್ ಗಾಯಗೊಂಡಿದ್ದು, ಆಟೋ ಮುಂಭಾಗ ಜಖಂಗೊಂಡಿದೆ. ಅಪಘಾತದಲ್ಲಿ ಗಾಯಗೊಂಡ ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.



