ಹಣ ಸಂಪಾದನೆಯ ಜತೆಗೆ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು. ಆಗ ಮಾತ್ರ ವ್ಯಕ್ತಿಗೆ ಗೌರವ ದೊರೆಯಲು ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಇವರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆದ ನಿವೃತ್ತ ಸೇನಾನಿ, ಶಿಕ್ಷಕ ದಿ| ಶೀಂಟೂರು ನಾರಾಯಣ ರೈ ಅವರ ಸ್ಮರಣೆ ʼಶೀಂಟೂರು ಸ್ಮೃತಿʼ-2023 ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸವಣೂರು ಸೀತಾರಾಮ ರೈ ಅವರು ಸುಮಾರು 25 ಕೋ.ರೂ.ಗಳನ್ನು ಸವಣೂರಿನ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಕಾರ್ಯಕ್ಕಾಗಿ ವಿನಿಯೋಗಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಸವಣೂರಿನ ಸಮಗ್ರ ಅಭಿವೃದ್ಧಿಯ ರೂವಾರಿಯಾಗಿರುವ ರೈಗಳು “ಸವಣೂರಿನ ಶಿಲ್ಪಿ’ಯಾಗಿದ್ದಾರೆ ಎಂದರು.
ಪ್ರೊ| ಡಾ| ಡಿ.ಎಸ್. ಶೇಷಪ್ಪ ಅವರು ಶೀಂಟೂರು ನಾರಾಯಣ ರೈಯವರ ಸಂಸ್ಮರಣೆ ಮಾಡಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ದುಬೈಯ ಉದ್ಯಮಿ ಆಶ್ರಫ್ ಶಾ ಮಾಂತೂರು ಮಾತನಾಡಿದರು. ಶಾಸಕ ಅಶೋಕ್ ಕುಮಾರ್ ರೈಯವರು ಶೀಂಟೂರು ನಾರಾಯಣ ರೈಗಳ ಪ್ರತಿಮೆಗೆ ಪುಷ್ಪಹಾರವನ್ನು ಸಮರ್ಪಿಸಿದ್ದಾರೆ.
ಬಳಿಕ ವಿದ್ಯಾರಶ್ಮಿ ವಿದ್ಯಾಲಯಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸೀತಾರಾಮ ರೈಗಳು ಸಮ್ಮಾನಿಸಿದರು.
ಸದಾಶಿವ ಶೆಟ್ಟಿಯವರು ಮಾತನಾಡಿ, ಸವಣೂರು ಸೀತಾರಾಮ ರೈಯವರು ಪ್ರಕೃತಿಯ ಸೌಂದರ್ಯ ತಾಣವಾಗಿರುವ ಈ ಗ್ರಾಮೀಣ ಭಾಗದಲ್ಲಿ ಬಹುದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು.
ಸಮ್ಮಾನ ಸ್ವೀಕರಿಸಿದ ವಿಕ್ರಂ ದತ್ತ ಮಾತನಾಡಿ, ಸವಣೂರು ಭಾಗದಲ್ಲಿ ಶಿಕ್ಷಣ ಕ್ರಾಂತಿಯ ಜತೆಗೆ ಧಾರ್ಮಿಕ, ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲೂ ಸೀತಾರಾಮ ರೈಗಳು ಸಾಧನೆ ಮಾಡಿದ್ದಾರೆ. ಅವರ ತಂದೆ ಶೀಂಟೂರು ನಾರಾಯಣ ರೈಗಳ ಶಿಸ್ತು, ಸಮಯಪಾಲನೆ ಹಾಗೂ ಬದುಕು ಎಲ್ಲವೂ ಮಾದರಿ ಎಂದರು.
ಇನ್ನೂ ಈ ಕಾರ್ಯಕ್ರಮದಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಎಸ್‌ಎನ್‌ಆರ್ ರೂರಲ್ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿಗಳಾದ ಸವಣೂರು ಸುಂದರ ರೈ, ರಶ್ಮಿ ಅಶ್ವಿನ್ ಶೆಟ್ಟಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ನಾರಾಯಣ ಮೂರ್ತಿ ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.



