ಮೂಲ್ಕಿ ಗಾಂಧೀ ಮೈದಾನದಲ್ಲಿ ನಡೆದ 77 ನೇ ¸ಸ್ವಾತಂತ್ರ್ಯೋತ್ಸವದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿದ್ದಾರೆ.

ಮುಲ್ಕಿ: ತಾಲ್ಲೂಕಿನಲ್ಲಿ ಎಲ್ಲಾ ಕಚೇರಿಗಳು ಒಂದೇ ಸೂರಿನಲ್ಲಿ ಬರುವಂತೆ ಆಡಳಿತ ಸೌಧ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಶೀಘ್ರ ಲೋಕಾರ್ಪಣೆ ಮಾಡಲಾಗುವುದು. ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವುದರ ಜೊತೆಗೆ ಕುಡಿಯುವ ನೀರಿನ ಬವಣೆ ನೀಗಿಸಲು 46 ಕೋಟಿ ಅನುದಾನ ಮೀಸಲಿಟ್ಟಿದ್ದು ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಕಾರ್ನಾಡ್ ಗಾಂಧಿ ಮೈದಾನದಲ್ಲಿ ನಡೆದ 77 ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ಮಾತನಾಡಿ ತಾಲ್ಲೂಕಿಗೆ ಬಹು ಕೋಟಿ ವೆಚ್ಚದ ಪ್ರವಾಸಿ ಮಂದಿರ ಕಾಮಗಾರಿ ಚಾಲನೆಯಲ್ಲಿದ್ದು ಶೀಘ್ರವೇ ಅಗ್ನಿಶಾಮಕ ದಳ, ನ್ಯಾಯಾಲಯ, ಮತ್ತಿತರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ಧ್ವಜಾರೋಹಣವನ್ನು ತಾಲ್ಲೂಕು ತಹಶಿಲ್ದಾರ್ ಪ್ರದೀಪ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮುಲ್ಕಿ ನ.ಪಂ ಮುಖ್ಯಾಧಿಕಾರಿ ಎನ್.ಎಂ. ಮೇಸ್ತ, ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾಧರ್, ನ. ಪಂ.ಸದಸ್ಯರು, ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ವಾಸದೇವ ಬೆಳ್ಳೆ, ಗೃಹರಕ್ಷಕ ದಳದ ಮಾಜೀ ಕಮಾಂಡರ್ ಮನ್ಸೂರ್ ಹಳೆಯಂಗಡಿ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಲ್ಕಿ ಎಸ್ ಐ ಮಾರುತಿ ನೇತೃತ್ವದಲ್ಲಿ ಗೃಹರಕ್ಷಕ ದಳ ಹಾಗೂ ತಾಲೂಕಿನ ವಿವಿಧ ಶಾಲೆಯ ಎನ್‌ಸಿಸಿ, ವಿದ್ಯಾರ್ಥಿಗಳಿಂದ, ಪಥ ಸಂಚಲನೆ ನಡೆಯಿತು. ನ್ಯಾಯವಾದಿ ಭಾಸ್ಕರ ಹೆಗ್ಡೆ ನಿರೂಪಿಸಿದರು
ಕಾರ್ಯಕ್ರಮದಲ್ಲಿ ತಾಲ್ಲೂಕು ವ್ಯಾಪ್ತಿಯ ಎಸ್ ಎಸ್ ಎಲ್ ಸಿ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು



