ಮೇಯಲು ಬಿಟ್ಟಿದ್ದ ಎರಡು ದನ ಮತ್ತು ಒಂದು ಕರುವನ್ನು ಕಳವು ಮಾಡಿದ ಘಟನೆ ಮಂಗಳೂರು ತಾಲೂಕಿನ ಬಡಗ ಎಡಪದವು ಗ್ರಾಮದ ಧೂಮಚಡವು ಆಟೋ ರಿಕ್ಷಾ ಪಾರ್ಕ್ ಬಳಿ ನಡೆದಿದೆ.
ಎಡಪದವು ಗ್ರಾಮದ ಹೊಸ ಗದ್ದೆ ನಿವಾಸಿ ಚಂದ್ರ ಗೌಡ ಅವರ ಒಂದು ಕರು ಮತ್ತು ಪರಿಸರದ ನಿವಾಸಿಯೊಬ್ಬರ ಎರಡು ದನಗಳು ಕಳವಾಗಿವೆ. ಆ. 14 ರಂದು ಮೇಯಲು ಹೋಗಿದ್ದ ಚಂದ್ರ ಗೌಡ ಅವರ ದನ ಕರುಗಳ ಪೈಕಿ 2 ದನಗಳು ಮನೆಗೆ ಮರಳಿದ್ದು, ಒಂದು ಕರು ವಾಪಸಾಗಿಲ್ಲ.

ಈ ಬಗ್ಗೆ ಆ. 15 ರಂದು ಸಂಜೆ ಧೂಮಚಡವು ಆಟೋ ರಿಕ್ಷಾ ಪಾರ್ಕ್ ಬಳಿ ಹುಡುಕಾಟ ನಡೆಸುತ್ತಿದ್ದಾಗ ಪರಿಚಯದ ವ್ಯಕ್ತಿಯೊಬ್ಬರು ಸಮೀಪದಲ್ಲಿರುವ ಅಂಗಡಿಯ ಸಿಸಿ ಕ್ಯಾಮೆರಾ ಪರಿಶೀಲಿಸುವಂತೆ ತಿಳಿಸಿದ್ದರು.
ಅದರಂತೆ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅಂಗಡಿಯ ಮುಂದೆ ಮಲಗಿದ್ದ ದನಗಳನ್ನು ಮತ್ತು ಕರುವನ್ನು ತಡ ರಾತ್ರಿ ವೇಳೆ ಇಬ್ಬರು ಕಳ್ಳರು ಹಿಡಿದು ಕಟ್ಟಿ ಕಾರಿನಲ್ಲಿ ತುಂಬಿಸುತ್ತಿರುವ ದೃಶ್ಯ ಸೆರೆಯಾಗಿರುವುದು ಕಂಡು ಬಂದಿದೆ.
ಈ ಬಗ್ಗೆ ಚಂದ್ರ ಗೌಡ ಅವರು ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




