ಮುಲ್ಕಿ: ಮುಲ್ಕಿ ಬಸ್ಸು ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಬಹು ಮಹಡಿ ಕಟ್ಟಡದ ತ್ಯಾಜ್ಯ ನೀರು ಪ್ರಧಾನ ರಸ್ತೆಯಲ್ಲಿ ಹರಿಯುತ್ತಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿ ರೋಗಗಳ ಭೀತಿ ಎದುರಾಗಿದೆ ಎಂದು ಮಾಜೀ ನ. ಪಂ.ಸದಸ್ಯ ಅಬ್ದುಲ್ ರಜಾಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದ ಬಳಿ ಕಾರ್ಯಾಚರಿಸಿರುವ ಫಾತಿಮಾ ಟವರ್ಸ್ ಬಹು ಮಹಡಿ ಕಟ್ಟಡದಲ್ಲಿ ಮಕ್ಕಳ ವಿದ್ಯಾರ್ಥಿ ನಿಲಯದ ತ್ಯಾಜ್ಯ ನೀರು ಪಿಟ್ ನಲ್ಲಿ ಭರ್ತಿಯಾಗಿ ರಸ್ತೆಗೆ ಹರಿಯುತ್ತಿದ್ದು ಕೂಡಲೇ ಕಟ್ಟಡದ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮುಲ್ಕಿ ನಗರ ಪಂಚಾಯತಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿ ಕೂಡಲೇ ಕಾರ್ಯಪ್ರವೃತ್ತರಾದ ನಗರ ಪಂಚಾಯತ್ ಮುಖ್ಯಾಧಿಕಾರಿ ಎನ್ಎಂ ಮೇಸ್ತ, ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಟ್ಟಡದ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಗೆ ಕೂಡ ದೂರು ನೀಡಿದ್ದು ಕೂಡಲೇ ಸರಿಪಡಿಸದಿದ್ದರೆ ಕಟ್ಟಡದ ಪರವಾನಿಗೆ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.



