ಮುಲ್ಕಿ: ಪಕ್ಷಿಕೆರೆ ಸಮೀಪದ ಕೊಯಿಕುಡೆ ಮದರ್ ತೆರೇಸಾ ಲೇಔಟ್ ನಲ್ಲಿ ವಾಸ್ತವ್ಯ ವಿರುವ ಶೀಲತಾ ಪೂಜಾರಿ ಎಂಬವರ ಮನೆಯಿಂದ ಕಳ್ಳರು ಲಕ್ಷಾಂತರ ಮೌಲ್ಯದ ನಗ -ನಗದನ್ನು ಕಳ್ಳತನ ಮಾಡಿದ್ದಾರೆ.
ಶೀಲತಾ ರವರ ಮನೆಯಲ್ಲಿ ಮೂರು ಮಂದಿ ದೊಡ್ಡವರು ಸಹಿತ ಇಬ್ಬರು ಮಕ್ಕಳು ವಾಸ್ತವ್ಯವಿದ್ದು ಶನಿವಾರ ನಾಗರಪಂಚಮಿ ಪ್ರಯುಕ್ತ ತಮ್ಮ ತವರು ಮನೆಗೆ ಹೋಗಿದ್ದರು.

ಆದರೆ ಮನೆಯವರು ಮಂಗಳವಾರ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದದ್ದು ಬೆಳಕಿಗೆ ಬಂದಿದೆ.
ಕಳ್ಳರು ಮನೆಯ ಹಿಂಬದಿಯ ಅಡಿಗೆ ಕೋಣೆಯ ಕಬ್ಬಿಣದ ಗ್ರಿಲ್ಸ್ ನ್ನು ಮೆಷಿನ್ ನಲ್ಲಿ ತುಂಡರಿಸಿ ಒಳಗಡೆ ಬಂದು ಹಿಂಬಾಗಿಲನ್ನು ಒಡೆದು ಎರಡು ಕೋಣೆಗಳನ್ನು ಜಾಲಾಡಿ ಒಂದು ಕಪಾಟಿನ ಬೀಗ ಒಡೆದು ಅದರಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಸುಮಾರು ಐದು ಲಕ್ಷ ಮೊತ್ತದ ನಗ ನಗದನ್ನು ಕಳವು ಮಾಡಿ ಹಿಂಭಾಗದಿಂದ ತೆರಳಿದ್ದಾರೆ.

ಶನಿವಾರ ಮನೆಯಲ್ಲಿದ್ದವರು ನಾಗರಪಂಚಮಿಗೆ ಹೋಗಿದ್ದರೂ ಭಾನುವಾರ ಮಧ್ಯಾಹ್ನ ಶೀಲತಾ ರವರ ಮಾವ ಜಯಶೀಲ ಪೂಜಾರಿ ಮನೆಗೆ ಬಂದು ನೋಡಿ ಪಂಜ ಮೊಗೆಪಾಡಿಯಲ್ಲಿರುವ ತಮ್ಮ ಹಳೆ ಮನೆಗೆ ಹೋಗಿದ್ದರು.
ಆದರೆ ಮಂಗಳವಾರ ಮಧ್ಯಾಹ್ನ ಶೀಲತಾರವರು ಮನೆಗೆ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಕೆಮ್ರಾಲ್ ಗ್ರಾ.ಪಂ. ಅಧ್ಯಕ್ಷ ಮಯ್ಶದ್ದಿ, ಸದಸ್ಯ ಸುರೇಶ್ ಪಂಜ, ಮುಲ್ಕಿ ಪೊಲೀಸರು,ಶ್ವಾನ ದಳ ಬೆರಳಚ್ಚುತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪೊಲೀಸ್ ಶ್ವಾನ ಮನೆ ಹಿಂಬಾಗಲಿನಿಂದ ಒಳಗೆ ಬಂದು ಬಳಿಕ ಮನೆ ಹಿಂಭಾಗದ ಗುಡ್ಡೆ ಬದಿಗೆ ಹೋಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಲತ ರವರ ಪತಿ ಭರತ್ ರಾಜ್ ಪೂಜಾರಿ ಕಳೆದ ಕೆಲ ದಿನಗಳ ಹಿಂದೆ ವಿದೇಶಕ್ಕೆ ಹೊಸ ಉದ್ಯೋಗಕ್ಕೆ ತೆರಳಿದ್ದು ಮನೆಯಲ್ಲಿ ನಡೆದ ಘಟನೆ ಬರ ಸಿಡಿಲಿನಂತೆ ಎರಗಿದ್ದು ಮನೆಯವರು ಕಂಗಾಲಾಗಿದ್ದಾರೆ.



