ಬಂಟ್ವಾಳ: ಕೊಲೆ ಯತ್ನ,ದರೋಡೆ, ಕಳ್ಳತನ ಸಹಿತ ವಿವಿಧ ಪ್ರಕರಣಗಳಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಠಾಣೆಗಳಲ್ಲಿ ಆರೋಪಿಯಾಗಿದ್ದು,ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸ್ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.

ಸಜೀಪ ಮುನ್ನೂರು ಗ್ರಾಮದ ಪೆರುವ ನಿವಾಸಿ ಇಬ್ರಾಹಿಂ ಅವರ ಮಗ ಉಮ್ಮರ್ ಫಾರೂಕ್ ಬಂಧಿತ ಆರೋಪಿ.
ಸುಮಾರು 17 ಪ್ರಕರಣಗಳಲ್ಲಿ ಉಮ್ಮರ್ ಫಾರೂಕ್ ಅವರು ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಈತ ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ, ಬಜಪೆ,ಕೋಣಾಜೆ,ಬರ್ಕೆ,ವಿಟ್ಲ,ಕಡಬ ಹೀಗೆ ಜಿಲ್ಲೆಯ ಬಹುತೇಕ ಎಲ್ಲಾ ಠಾಣೆಗಳಲ್ಲಿ ಈತನ ವಿರುದ್ದ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಇಂದು ಬೆಳಿಗ್ಗೆ ಈತ ಮಾಣಿ ಪರಿಸರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ನಗರ ಠಾಣಾ ಪೋಲೀಸರು ಈತನ ಬಂಧನಕ್ಕೆ ಬಲೆಬೀಸಿದ್ದರು.
ನಗರ ಠಾ಼ಣಾ ಎಸ್.ಐ.ರಾಮಕೃಷ್ಣ ನೇತ್ರತ್ವದಲ್ಲಿ ಪೋಲೀಸ್ ಸಿಬ್ಬಂದಿಗಳಾದ ಗಣೇಶ್,ಮೋಹನ್ ಅವರು ಕಾರ್ಯಚರಣೆ ನಡೆಸಿ ಮಾಣಿಯಲ್ಲಿ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



