ಬಂಟ್ವಾಳ: ಯಕ್ಷಗಾನದಿಂದ ಕೇವಲ ಮನೋರಂಜನೆ ಅಲ್ಲದೆ ಧಾರ್ಮಿಕ ಚಿಂತನೆ, ನೀತಿಸಾರ, ಭಕ್ತಿ,ಭಾವಗಳು ಉದ್ದೀಪನಗೊಳ್ಳುವುದು. ಯಕ್ಷಗಾನ ಪುರಾಣದ ಕಥೆಗಳನ್ನು ತಿಳಿಸುವ ಅಸಾಧಾರಣ ದೃಶ್ಯ ಮಾಧ್ಯಮ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನಡೆಸುವ ಯಕ್ಷಧ್ರುವ-ಯಕ್ಷಶಿಕ್ಷಣ ಅಭಿಯಾನದ ಪ್ರಯುಕ್ತ ಬಂಟ್ವಾಳ ತಾಲೂಕಿನ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಯಕ್ಷಗಾನ ನಾಟ್ಯ ತರಬೇತಿ ತರಗತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಕಲಾವಿದರಿಗೆ ಸಮಾಜದಲ್ಲಿ ಉತ್ತಮ ಗೌರವವಿದೆ. ಯುವ ಭಾಗವತ ಪಟ್ಲ ಸತೀಶ ಶೆಟ್ಟಿ ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಲಕ ಕಲಾವಿದರಲ್ಲಿ ಹೊಸ ಬೆಳಕು ಮೂಡಿದೆ ಎಂದರು.
ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಶಾಲೆಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಯಕ್ಷಗುರು ಅನ್ವೇಶ್ ಆರ್.ಶೆಟ್ಟಿ, ಪತ್ರಕರ್ತ ರತ್ನದೇವ್ ಶೆಟ್ಟಿ, ಶಿಕ್ಷಕ ವೃಂದ, ಸಿಬಂದಿ ವರ್ಗ ಮತ್ತಿತರರಿದ್ದರು.
ಮುಖ್ಯ ಶಿಕ್ಷಕ ಕಮಲಾಕ್ಷ ಅವರು ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕರಾದ ಪ್ರಕಾಶ್ ವಂದಿಸಿದರು.ದೇವದಾಸ್ ಕಾರ್ಯಕ್ರಮ ನಿರೂಪಿಸಿದರು. 86 ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯ ತರಬೇತಿಯಲ್ಲಿ ಭಾಗವಹಿಸಿದರು







