ದಕ್ಷಿಣ ಕನ್ನಡ : ಮಂಗಳೂರಿನಲ್ಲಿ ಜೋಗಿ ಸಮುದಾಯ ಮತ್ತು ಜೋಗಿ ಮಠದ ಮಠಾಧೀಶರ ಸಮಸ್ಯೆ ತಾರಕಕ್ಕೇರುವ ಎಲ್ಲ ಲಕ್ಷಣಗಳು ಇದೆ, ಇದಕ್ಕೆ ಪೂರಕ ಎಂಬಂತೆ ಜೋಗಿ ಮಠದ ಹಿತರಕ್ಷಣಾ ಸಮಿತಿ ಮುಖ್ಯಸ್ಥರು ಪತ್ರಿಕಾಗೋಷ್ಠಿ ನಡೆಸಿ ಮಠದ ಆವರಣದಲ್ಲಿ ಉಪವಾಸ ಸತ್ಯಾಗ್ರಹದ ಮುನ್ಸೂಚನೆಯನ್ನು ನೀಡಿದ್ದಾರೆ.
ಉತ್ತರ ಭಾರತದ ಯೋಗಿ ಪರಂಪರೆಗೆ ಸಂಬಂಧವಿರುವ ಕದ್ರಿ ಜೋಗಿಮಠದ ಸಂಬಂಧ ಇಂದು ನಿನ್ನೆಯದಲ್ಲ, ಸಮಸ್ತ ಜೋಗಿ ಸಮುದಾಯದ ಶ್ರದ್ಧಾ ಕೇಂದ್ರವಾದ ಮಠದಲ್ಲಿ ಇತ್ತೀಚಿನ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮಠಾಧೀಶರು , ಶಿಷ್ಯರಿಗೆ ಮತ್ತು ಸಮಾಜಕ್ಕೆ ತಿಳಿಯದಂತೆ ಜೋಗಿಮಠದ ಕಾಲಭೈರವ ದೇವರ ಮೂಲ ಮೂರ್ತಿಯನ್ನು ಹೊರಗಿಟ್ಟು ನೂತನ ಮೂರ್ತಿಯನ್ನು ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಿದ್ದಾರೆ ಎಂಬುದು ಸಮಾಜದ ಆರೋಪ ಮತ್ತು ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣ.

ಮಠದ ಆವರಣದಲ್ಲಿರುವ ಕಾಲಭೈರವ ದೇವರ ಮೂರ್ತಿ ಬಹಳ ಕಾರಣಿಕವುಳ್ಳದ್ದು ಎಂಬುದು ಭಕ್ತರ ನಂಬಿಕೆ. ಬ್ರಹ್ಮಕಲಶೋತ್ಸವದ ವೇಳೆ ಮಠಾಧೀಶ ರಾಜಯೋಗಿ ಶ್ರೀ ನಿರ್ಮಲನಾಥ ಮಹಾರಾಜರು ತಮ್ಮ ರಾಜಸ್ತಾನಿ ಭಕ್ತರೊಂದಿಗೆ ಸೇರಿಕೊಂಡು, ಜೋಗಿ ಸಮುದಾಯವನ್ನು ಕಡೆಗಣಿಸಿ ಸ್ವಇಚ್ಛೆಯಿಂದ ಹಳೆಯ ಮೂರ್ತಿಯನ್ನು ಬದಲಾಯಿಸಿ, ರಾಜಸ್ತಾನಿ ಭಕ್ತರು ನೀಡಿರುವ ನೂತನ ಗ್ರಾನೈಟ್ ಕಾಲಭೈರವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದು ಶಿಷ್ಯರಿಗೆ ತಿಳಿದು ಡಿಸಿ, ಪುರಾತತ್ವ ಇಲಾಖೆಗಳಿಗೆ ದೂರು ನೀಡಿ ಮೂಲ ಮೂರ್ತಿಯನ್ನು ಉಳಿಸುವ ಮತ್ತು ಪುನರ್ಪ್ರತಿಷ್ಠಾಪಿಸುವ ಪ್ರಯತ್ನ ಮಾಡಲಾಗಿದೆ.
ಜೋಗಿಮಠದ ಹಿತರಕ್ಷಣಾ ಸಮಿತಿಯು ಪುರಾತತ್ವ ಇಲಾಖೆ ಮೂಲಕ ಕಾಲಭೈರವನ ಮೂಲ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದೆ. ಅಲ್ಲದೆ ತನಿಖೆಗೆ ಆಗ್ರಹವನ್ನೂ ಮಾಡಲಾಗಿದೆ. ಆದರೆ ಮಠಾಧೀಶರು ನಮ್ಮ ಮನವಿಗೆ ಸೊಪ್ಪು ಹಾಕದೆ, ಡಿಸಿಯವರ ಆದೇಶಕ್ಕೂ ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ. ಇದೀಗ ಮಠದ ಶಿಷ್ಯ ಪರಂಪರೆ ಮಠಾಧೀಶರ ವಿರುದ್ಧವೇ ಸಿಡಿದೆದ್ದಿದ್ದು, ಸಮಸ್ತ ಜೋಗಿಸಮುದಾಯು ಮಠದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



