ಬೆಳ್ತಂಗಡಿ; ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಸಂಬ0ಧ ಪ್ರತಿಭಟನೆಗೆ ಇಳಿಯುವ ಬದಲು ಬಿಜೆಪಿಗರು ಪ್ರಕರಣದ ಮರು ತನಿಖೆಗೆ ಕೇಂದ್ರ ಸರಕಾರವನ್ನು ಆಗ್ರಹಿಸಲಿ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.

ಇವರು ರಾಜ್ಯ ಜನಪರ ಸಂಘಟನೆಗಳ ವೇದಿಕೆ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ರಾಜ್ಯ ಮಟ್ಟದ ಚಲೋ ಬೆಳ್ತಂಗಡಿ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂದು ಕೇಂದ್ರ ಹಾಗೂ ರಾಜ್ಯ ದಲ್ಲಿದ್ದ ಬಿಜೆಪಿ ಸರಕಾರಗಳು ನಿರಪರಾಧಿಯನ್ನು ಅಪರಾಧಿಯೆಂದು ಬಿಂಬಿಸಿ ತನಿಖೆಯ ದಾರಿ ತಪ್ಪಿಸಿದವು. ಈಗ ಪ್ರತಿಭಟನೆ ನಡೆಸುವುದನ್ನು ಬಿಟ್ಟು ಮರು ತನಿಖೆಗೆ ತಮ್ಮದೇ ಸರಕಾರದ ಮೇಲೆ ಒತ್ತಡ ಹೇರಲಿ ಎಂದರು.
ಇನ್ನೂ ಇದೇ ವೇಳೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, ಸೌಜನ್ಯಾ ಪ್ರಕರಣ ನ್ಯಾಯಾಂಗ ಸುಪರ್ದಿಯಲ್ಲೇ ತನಿಖೆಯಾಗಬೇಕು ಎಂದರು.
ರಾಜ್ಯ ಜನಪರ ಸಂಘಟನೆಗಳ ವೇದಿಕೆ ಸಂಚಾಲಕ ಬಿ.ಎಂ. ಭಟ್ ಮಾತನಾಡಿ, ಸಿಬಿಐ ಕೋರ್ಟ್ ತನಿಖೆ ಯಲ್ಲಿನ ಲೋಪಗಳನ್ನು ಉಲ್ಲೇಖ ಮಾಡಿದೆ. ಸಂಸದರು ಲೋಕಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕೇ ಹೊರತು ಪ್ರತಿಭಟನೆಯಲ್ಲಿ ಅಲ್ಲ ಎಂದರು.
ಇನ್ನೂ ಈ ಸಂದರ್ಭದಲ್ಲಿ ಜನವಾದಿ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ಡಾ| ಮೀನಾಕ್ಷಿ ಬಾಳಿ, ಉಪಾಧ್ಯಕ್ಷೆ ನೀಲಾ, ಸೌಜನ್ಯಾ ತಾಯಿ ಕುಸುಮಾವತಿ, ಪ್ರೊ| ನರೇಂದ್ರ ಎಲ್. ನಾಯಕ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ, ಹೋರಾಟಗಾರ್ತಿ ಕೆ.ಎಸ್.ವಿಮಲಾ, ವಕೀಲ ಶ್ರೀನಿವಾಸ್, ಕಾಂಗ್ರೆಸ್‌ನ ಶ್ಯಾಲೆಟ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ್ ಮತ್ತಿತರರು ಮರು ತನಿಖೆಗೆ ಆಗ್ರಹಿಸಿದ್ದಾರೆ.



