ದಿಗ್ಗಜ ನಟ, ತೆಲುಗು ದೇಶಂ ಸಂಸ್ಥಾಪಕ ದಿವಂಗತ ಎನ್.ಟಿ. ರಾಮರಾವ್ ಅವರ 100ನೇ ಜನ್ಮ ಶತಮಾನೋತ್ಸವಕ್ಕಾಗಿ 100 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಲಾಗಿದೆ.

ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು 100ರ ನಾಣ್ಯ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ನಂದಮೂರಿ ಬಾಲಕೃಷ್ಣ, ರಾಮಕೃಷ್ಣ, ಭುವನೇಶ್ವರಿ, ಪುರಂದರೇಶ್ವರಿ ಸೇರಿದಂತೆ ಎನ್‌ಟಿ ರಾಮರಾವ್ ಅವರ ಪುತ್ರರು ಮತ್ತು ಪುತ್ರಿಯರು ಸೇರಿ ಕುಟುಂಬದ ಇತರ ಸದಸ್ಯರೂ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಟಿಡಿಪಿ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಕೂಡ ಭಾಗಿಯಾಗಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ನಾಯಕರು ಮತ್ತು ಹಲವು ಟಿಡಿಪಿ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಎನ್ಟಿಆರ್ ಸ್ಮರಣಾರ್ಥ ಹೈದರಾಬಾದ್ನಲ್ಲಿರುವ ಭಾರತ ಸರ್ಕಾರದ ಟಂಕಸಾಲೆಯಲ್ಲಿ ಮುದ್ರಿಸಲಾಯಿತು. ಕೇಂದ್ರ ಹಣಕಾಸು ಸಚಿವಾಲಯದ ನಿರ್ದೇಶನದ ಮೇರೆಗೆ ಮುದ್ರಿಸಲಾಗಿದೆ.
ಅಂದಹಾಗೆಯೇ, 100 ರೂಪಾಯಿ ವಿಶೇಷ ನಾಣ್ಯವನ್ನು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಮುದ್ರಿಸಿಲ್ಲ. ಎನ್ಟಿಆರ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಬಿಡುಗಡೆ ಮಾಡಲಾಗಿದೆ.



