ಬಂಟ್ವಾಳ: ಗ್ರಾಮ ಪಂಚಾಯತ್ ಸದಸ್ಯೆ ಯೋರ್ವರು ನೀಡಿದ್ದ ರಾಜಿನಾಮೆ ಪತ್ರವನ್ನು ವಾಪಸು ಪಡೆದುಕೊಳ್ಳುವ ಮೂಲಕ ರಾಯಿ ಗ್ರಾಮ ಪಂಚಾಯತ್ ನಲ್ಲಿ ಉಂಟಾಗಿದ್ದ ರಾಜಕೀಯ ಗೊಂದಲಕ್ಕೆ ತೆರೆ ಬಿದ್ದಿದೆ.

ರಾಯಿ ಗ್ರಾಮ ಪಂಚಾಯತ್ ನ ಕೊಯಿಲ ಒಂದನೇ ವಾರ್ಡ್ ಸದಸ್ಯೆ ಪುಷ್ಪಾವತಿ ಪೂಜಾರಿ ಕಳೆದ ಬುಧವಾರದಂದು ತನ್ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬರೆದ ಪತ್ರವನ್ನು ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ಇಟ್ಟು ಬಂದಿದ್ದರು. ಆದರೆ ಅ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಪತ್ರದಲ್ಲಿ ನಾನು ಕೊಯಿಲ ಒಂದನೇ ವಾರ್ಡಿನ ಬೂತ್ ಸಂಖ್ಯೆ 27 ರಲ್ಲಿ ಬಿಜೆಪಿ ಬೆಂಬಲಿತ ಚುನಾಯಿತ ಸದಸ್ಯೆಯಾಗಿದ್ದು, ನನ್ನ ವಾರ್ಡಿನಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಅನಗತ್ಯ ಹಸ್ತಕ್ಷೇಪ ನಡೆಸುತ್ತಿದ್ದಾರೆ.
ನನ್ನ ವಾರ್ಡಿನಲ್ಲಿ ಸರ್ಕಾರದ ಅನುದಾನದಿಂದ ರಸ್ತೆ ಅಭಿವೃದ್ಧಿ ಮತ್ತು ರಿಪೇರಿ ಮುಂತಾದ ಕಾಮಗಾರಿಗಳನ್ನು ನನ್ನ ಗಮನಕ್ಕೆ ತಾರದೆ ನಡೆಸುತ್ತಿದ್ದು, ನನಗೆ ಅವಮಾನ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರಿಂದಾಗಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದರು.
ಆದರೆ ಈಗ ರಾಜಿನಾಮೆ ಪತ್ರವನ್ನು ವಾಪಸು ಪಡೆದಿದ್ದು, ಪುಷ್ಪಾವತಿಯಾದ ನಾನು ಕೊಯಿಲ ವಾರ್ಡ್ ಸಂಖ್ಯೆ ಒಂದನೇ ವಾರ್ಡಿನ ಬೂತ್ ಸಂಖ್ಯೆ 27 ರಲ್ಲಿ ಬಿಜೆಪಿ ಬೆಂಬಲಿತ ಚುನಾಯಿತ ಸದಸ್ಯೆಯಾಗಿದ್ದು ಅಗಸ್ಟ್ 24 ರಂದು ಅಧ್ಯಕ್ಷರ ಕೊಠಡಿಯಲ್ಲಿ ರಾಜಿನಾಮೆ ಪತ್ರ ಇರಿಸಿದ್ದು,ಅಗಸ್ಟ್ 30 ರಂದು ಗ್ರಾ.ಪಂ.ಅಧ್ಯಕ್ಷರ ಜೊತೆ ಚರ್ಚಿಸಿ ರಾಜಿನಾಮೆ ಪತ್ರವನ್ನು ಯಾವುದೇ ಒತ್ತಡ ಒತ್ತಡವಿಲ್ಲದೆ ನನ್ನ ಸ್ವ ಇಚ್ಛೆಯಿಂದ ಹಿಂಪಡೆಯುತ್ತಿದ್ದೇನೆ ಬರೆಯಲಾಗಿದೆ.
ರಾಯಿ ಗ್ರಾ.ಪಂ.ನಲ್ಲಿ ಯಾವುದೇ ಭಿನ್ನಮತ ಇಲ್ಲ: ಸಂತೋಷ್ ರಾಯಿಬೆಟ್ಟು
ರಾಯಿ ಗ್ರಾಮಪಂಚಾಯತ್ ನ ಕೊಯಿಲ ಒಂದನೇ ವಾರ್ಡಿನ ಸದಸ್ಯೆ ಪುಷ್ಪಾವತಿ ಅವರು ಅಗಸ್ಟ್ 24 ರಂದು ರಾಜಿನಾಮೆ ಪತ್ರವನ್ನು ನನ್ನ ಕೊಠಡಿಯಲ್ಲಿ ಇರಿಸಿದ್ದರು. ಅ ಸಂದರ್ಭದಲ್ಲಿ ನಾನು ಕಚೇರಿಯಲ್ಲಿ ಮತ್ತು ಊರಿನಲ್ಲಿ ಇರಲಿಲ್ಲ . ವೈಯಕ್ತಿಕ ಕೆಲಸದ ನಿಮಿತ್ತ ಹೊರ ಜಿಲ್ಲೆಯಲ್ಲಿದ್ದೆ. ಅ ಬಳಿಕ ಊರಿಗೆ ಬಂದು ಅವರ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿದೆ . ಅವರು ರಾಜಿನಾಮೆ ಪತ್ರವನ್ನು ಹಿಂಪಡೆದು ಕೊಂಡಿದ್ದಾರೆ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ರಾಜೀನಾಮೆ ಅಂಗೀಕಾರ ಆಗುವ ಮೊದಲೇ ರಾಜೀನಾಮೆ ಎಂದು ಬರೆಯಲಾಗಿದೆ. ಇದು ಸತ್ಯಕ್ಕೆ ದೂರವಾಗಿದೆ. ಮತ್ತು ರಾಯಿಯಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



