ದಕ್ಷಿಣ ಕನ್ನಡ : ಸುಳ್ಯ ಪೊಲೀಸರು ದಾಖಲಿಸಿರುವ ಸುಳ್ಳು ಮುಖದ್ದಮೆಗಳ ವಿರುದ್ಧ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ಕಾನೂನು ಹೋರಾಟ ನಡೆಸಿ ಯಶಸ್ವಿಯಾಗಿದೆ. ಹಾಗೂ ಪೊಲೀಸರಿಗೆ ಹೈಕೋರ್ಟ್ ಸರಿಯಾಗಿ ಚಾಟಿ ಬೀಸಿ ತರಾಟೆಗೆ ತೆಗೆದುಕೊಂಡ ವರದಿಯಾಗಿದೆ. ಪೊಲೀಸರು ಕೆಲವು ಮಾಧ್ಯಮಗಳ ಮೇಲೆ ದಾಖಲಿಸಿದ್ದ ಸುಳ್ಳು ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ . ಇಲ್ಲಿನ ವಿಶೇಷ ಎಂದರೆ ಪೊಲೀಸರು ದಾಖಲಿಸಿರುವ ಕೇಸಿಗೆ ಮಾಧ್ಯಮ ಪ್ರತಿನಿಧಿಗಳು ಜಾಮೀನು ಪಡೆಯುವ ಮುನ್ನವೇ ರಾಜ್ಯ ಉಚ್ಛ ನ್ಯಾಯಾಲಯ ಪತ್ರಕರ್ತರ ಸ್ವಾತಂತ್ರ್ಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಇತರ ಪತ್ರಕರ್ತರ ಸಂಘದ ಸದಸ್ಯರ ಮೇಲೆ ಕೇಸು ದಾಖಲಾಗಿದ್ದರೂ ಅದು ಪರ್ಯಾಯ ಪತ್ರಕರ್ತರ ಸಂಘ ಎಂದು ಪರಿಗಣಿಸದೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ನಡೆಸಿದ್ದ ಕಾನೂನು ಹೋರಾಟಕ್ಕೆ ಜಯ ದೊರೆತಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಕೋರ್ಟ್ ಎತ್ತಿ ಹಿಡಿದಿದೆ.

ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿ ಅಂತರ್ಜಾಲದಲ್ಲಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಸುವೋ ಮೋಟೋ ಕೇಸು ದಾಖಲಾಗಿತ್ತು. ಮಾಧ್ಯಮಗಳ ಮೇಲಿನ ಕೇಸು ದಾಖಲಾತಿಯನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ತಾಲೂಕು ಜರ್ನಲಿಸ್ಟ್ ಯೂನಿಯನ್ ಘಟಕ ಯೂನಿಯನ್ ಜಿಲ್ಲಾ ಮತ್ತು ರಾಜ್ಯ ಸಮಿತಿಯ ನಿರ್ದೇಶನದಂತೆ ಹೈಕೋರ್ಟ್ ಮೊರೆ ಹೋಗಿತ್ತು.

ಘಟನೆಗೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯಧಾರಗಳ ಜೊತೆ ನೇರ ಹಾಗೂ ಸ್ಪಷ್ಟ ಮಾಹಿತಿಯನ್ನು ಭಿತ್ತರಿಸಿದ ಮಾಧ್ಯಮಗಳ ಪರವಾಗಿ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಹೈಕೋರ್ಟಲ್ಲಿ ಈ ಬಗ್ಗೆ ವಾದ ಮಂಡಿಸಿದ್ದರು. ನ್ಯಾಯವಾದಿಗಳಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿಸಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಮಾಧ್ಯಮಗಳ ಮೇಲೆ ದಾಖಲಾದ ಎಫ್.ಐ.ಆರ್. ಮೇಲೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಪತ್ರಿಕಾ ಮಾಧ್ಯಮಗಳ ಸ್ವಾತಂತ್ರ್ಯಹರಣಕ್ಕೆ ಮುಂದಾದ ಪೊಲೀಸ್ ಇಲಾಖೆಗೆ ಚಾಟಿ ಬೀಸಿದೆ. ಪತ್ರಿಕಾ ಧರ್ಮಕ್ಕೆ ನ್ಯಾಯ ಸಂದಿದೆ.



