ಮಂಗಳೂರು: “ಅಭಿಮತ” ವಾಹಿನಿಯ “ಪಂಚಮ ಸಂಭ್ರಮ” ಹಾಗೂ ನೂತನ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭ ಆದಿತ್ಯವಾರ ನಗರದ ಕೆಪಿಟಿ ಸಮೀಪದ ಶರಬತ್ ಕಟ್ಟೆ ಬಳಿ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಅಭಿಮತ ವಾಹಿನಿ ಇಂದು ನಾಡಿನೆಲ್ಲೆಡೆ ಮನೆಮಾತಾಗಿದೆ. ಐದು ವರ್ಷಗಳಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿರುವ ವಾಹಿನಿಯು ಮುಂದಿನ ದಿನಗಳಲ್ಲಿ ತುಳುನಾಡು ಮಾತ್ರವಲ್ಲದೆ ಜಿಲ್ಲೆ, ರಾಜ್ಯದ ಗಡಿದಾಟಿ ದೇಶ ವಿದೇಶಗಳಲ್ಲಿ ಹೆಸರು ಪಡೆಯಲಿ” ಎಂದು ಶುಭ ಹಾರೈಸಿದರು.

ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರು ಮಾತಾಡುತ್ತಾ, “ಅಭಿಮತ ವಾಹಿನಿಯು ಇಂದು 5 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಆಚರಿಸುತ್ತಿದೆ. ಮಹಿಳೆಯೊಬ್ಬರು ಮಾಧ್ಯಮ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಾಧ್ಯಮ ಸಂಸ್ಥೆಯನ್ನು ಕಟ್ಟಿಕೊಂಡು ಬದುಕನ್ನು ಹೋರಾಟ ಮಾಡಿಕೊಂಡಿರುವ ಮಮತಾ ಪಿ ಶೆಟ್ಟಿ ಅವರು ಅಭಿನಂದನಾರ್ಹರು. ಅವರಿಗೆ ಬೆನ್ನೆಲುಬಾಗಿ ನಿಂತಿರುವುದು ಖುಷಿ ತಂದಿದೆ” ಎಂದರು.

ಬಳಿಕ ಮಾತಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು, “ದೇವರು ಶ್ರಮಕ್ಕೆ ಖಂಡಿತ ಪ್ರತಿಫಲ ಕೊಟ್ಟೇ ಕೊಡುತ್ತಾರೆ. ಮಾಧ್ಯಮಗಳು ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಭಿಮತ ವಾಹಿನಿಯು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದು ಮುನ್ನುಗ್ಗಲಿ. ಐದು ವರ್ಷ ಪೂರೈಸಿದ ವಾಹಿನಿಯು ಕನ್ಯಾನ ಸದಾಶಿವ ಶೆಟ್ಟಿಯವರ ಸಾರಥ್ಯದಲ್ಲಿ ಉತ್ತಮ ರೀತಿಯಲ್ಲಿ ಬೆಳೆಯಲಿ” ಎಂದರು.
ಪಟ್ಲ ಸತೀಶ್ ಶೆಟ್ಟಿ ಅವರು ಮಾತಾಡುತ್ತಾ, “ಅಭಿಮತ ವಾಹಿನಿಯು ಈಗಾಗಲೇ ಜನರನ್ನು ತಲುಪಿದೆ. ನಮ್ಮ ಪಟ್ಲ ಫೌಂಡೇಶನ್ ನ ವಿವಿಧ ಕಾರ್ಯಕ್ರಮಗಳಲ್ಲಿ ವಾಹಿನಿಯು ಒಳ್ಳೆಯ ಪ್ರಚಾರವನ್ನು ನೀಡಿದೆ. ಒಂದೊಳ್ಳೆ ಕಾರ್ಯಕ್ಕೆ ನಾವೆಲ್ಲರೂ ಜೊತೆಯಾಗಿದ್ದೇವೆ. ಮುಂದಿನ ದಿನಗಳಲ್ಲಿ ವಾಹಿನಿಯು ಎತ್ತರಕ್ಕೆ ಬೆಳೆಯಲಿ” ಎಂದು ಶುಭ ಹಾರೈಸಿದರು.

ಮಾಜಿ ಸಚಿವ ರಮಾನಾಥ್ ರೈ ಮಾತಾಡಿ, “ಅಭಿಮತ ವಾಹಿನಿಯು ಜಿಲ್ಲೆಯಲ್ಲಿ ಪ್ರಭಾವಿ ಮಾಧ್ಯಮವಾಗಿ ಬೆಳೆದಿದೆ. ನೈಜ ಸುದ್ದಿಯನ್ನು ಜನರಿಗೆ ತಲುಪಿಸುವುದು ಮಾಧ್ಯಮದ ಜವಾಬ್ದಾರಿಯಾಗಿದೆ. ಹೀಗಾಗಿ ಸಮಾಜದಲ್ಲಿ ಯಾವುದೇ ಬೇಧ ಭಾವಕ್ಕೆ ಅವಕಾಶ ಕೊಡದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿ” ಎಂದರು.
ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾಪೋಷಕ ಹಾಗೂ ಅಭಿಮತ ವಾಹಿನಿಯ ಪ್ರಮೋಟರ್ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಅನಘ ರಿಫೈನರಿ ಆಡಳಿತ ನಿರ್ದೇಶಕ ಶಾಂಭಶಿವ ರಾವ್, ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಶಿವಕುಮಾರ್, ಮಾಜಿ ಸಚಿವ ರಮಾನಾಥ್ ರೈ, ಹಾಜಿ ಉಸ್ಮಾನ್ ಕರೋಪಾಡಿ, ಕೊಲ್ಲಾಡಿ ಬಾಲಕೃಷ್ಣ ಶೆಟ್ಟಿ, ಸಚ್ಚಿದಾನಂದ, ಅಭಿಮತ ವಾಹಿನಿಯ ನಿರ್ದೇಶಕಿ ಮಮತಾ ಪಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.














