ಮಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಡಾರ ಪ್ರಕರಣ ಏರಿಕೆಯಾಗಿದ್ದು, ದ.ಕ.ದಲ್ಲಿ ಕಳೆದ ವರ್ಷ ಕೇವಲ 3 ಮತ್ತು ಉಡುಪಿಯಲ್ಲಿ 5 ಇದ್ದ ಪ್ರಕರಣ ಈ ವರ್ಷ 141 ಮತ್ತು 16ಕ್ಕೆ ಏರಿಕೆ ಕಂಡಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮಿಷನ್ ಇಂದ್ರ ಧನುಷ್ ಎಂಬ ಕಾರ್ಯಕ್ರಮ ಇದ್ದು ನಿಯಮಿತವಾಗಿ ನೀಡಲಾಗುವ ಲಸಿಕೆಯಿಂದ ವಂಚಿತರಾದ ಗರ್ಭಿಣಿ 5 ವರ್ಷದೊಳಗಿನ ಮಕ್ಕಳನ್ನು ಪತ್ತೆಹಚ್ಚಿ ಲಸಿಕೆ ನೀಡುವುದು ಇದರ ಉದ್ದೇಶ, ಕಳೆದ ವರ್ಷ ಅಭಿಯಾನ ನಡೆದಿರಲಿಲ್ಲ. ಆದ್ದರಿಂದ 81 ಮಂದಿಯನ್ನಷ್ಟೇ ಪರೀಕ್ಷಿಸಲಾಗಿತ್ತು. ಈ ವರ್ಷ ಮತ್ತೆ ಅಭಿಯಾನ ನಡೆಯುತ್ತಿದ್ದು, ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಈ ವರ್ಷ 299 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸುವ ಪ್ರಕರಣ ಯುವಜನತೆಯಲ್ಲಿಯೂ ಪತ್ತೆಯಾಗಿದೆ.
ತೀವ್ರ ಜ್ವರ, ದೇಹದಲ್ಲಿ ನೀರಿಲ್ಲದ ಗುಳ್ಳೆ ಇದ್ದಲ್ಲಿ ಶಂಕಿತ ಪ್ರಕರಣಗಳೆಂದು ಪರಿಗಣಿಸಿ ಅಂಥವರ ಗಂಟಲು ದ್ರವ ಮತ್ತು ಗತ್ತದೆ ಮಾದರಿಯನ್ನು ದಾರ ಅಥವಾ ರುವಾ ಪರೀಕ್ಷೆಗೆಂದು ಕಳುಹಿಸಲಾಗುತ್ತದೆ. ಇದರ ಪ್ರಯೋಗಾಲಯ ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಸರಕಾರಿ ವಲಯದಲ್ಲಿ ಇಲ್ಲದ ಕಾರಣ ಹಾಸನದ ಎಚ್‌ಐಎಂಎಸ್ ಅಥವಾ ಬೆಂಗಳೂರಿನ ಎನ್‌ಐವಿಗೆ ಕಳುಹಿಸುವುದು ಅನಿವಾರ್ಯ, ಅಲ್ಲಿ ಒತ್ತಡ ಇದ್ದರೆ ವರದಿ ಬರಲು 5ರಿಂದ 6 ದಿನ ತಗಲುತ್ತದೆ. ಅಷ್ಟರಲ್ಲಿ ರೋಗ ಲಕ್ಷಣ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ದ.ಕ. ಅಥವಾ ಉಡುಪಿಯಲ್ಲಿ ಪ್ರಯೋಗಾಲಯ ತೆರೆಯಬೇಕು ಎಂಬ ಬೇಡಿಕೆ ಬರುತ್ತಿದೆ.
ಉಡುಪಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ದಡಾರ ಪ್ರಕರಣ ಹೆಚ್ಚಾಗಿರಬಹುದು. ಆದರೆ ಔಟ್‌ಬ್ರೇಕ್ (ಹಠಾತ್ ಏರಿಕೆ) ಆಗಿಲ್ಲ. ಒಂದು ತಾಲೂಕಿನಲ್ಲಿ ನಾಲ್ಕು ವಾರದೊಳಗೆ 5ಕ್ಕಿಂತ ಹೆಚ್ಚಿನ ಪ್ರಕರಣ ಒಟ್ಟಾಗಿ ಬಂದರೆ ಅದನ್ನು ಬಿಟ್‌ಬ್ರೇಕ್ ಎನ್ನಲಾಗುತ್ತದೆ. ಉಡುಪಿ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು,
ದಡಾರ ರುಬೆಲ್ಲಾ ವೈರಸ್‌ನಿಂದ ಬರುವಂತಹ ಕಾಯಿಲೆಗಳು, ದಡಾರದಲ್ಲಿ ಅಧಿಕ ಪ್ರಮಾಣದ ಜ್ವರ ಇರುತ್ತದೆ, ದೇಹದಲ್ಲಿ ಕೆಂಪು ಬಣ್ಣದ ನೀರಿಲ್ಲದ ಗುಳ್ಳೆ (ಬೊಕ್ಕೆ) ಕಾಣಿಸಿಕೊಳ್ಳುತ್ತದೆ. ಮುಖ, ತೋಳು, ಕುತ್ತಿಗೆ, ಕಾಲುಗಳ ಅಡಿ ಭಾಗದಲ್ಲಿ ದಣೆಗಳು (rashes) ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ಒಣ ಕೆಮ್ಮು, ಮೂಗು ಸೋರುವಿಕೆ, ಗಂಟಲು ಕೆರೆತವೂ ಇರುತ್ತದೆ. ರುಬೆಲ್ಲಾದಲ್ಲಿ ಜ್ವರ, ತಲೆನೋವು, ಕಣ್ಣು ಅಲ್ಪಪ್ರಮಾಣದಲ್ಲಿ ಗುಲಾಬಿ ಬಣ್ಣಕ್ಕೆ ತಿರುಗುವುದು ಮತ್ತು ದಡಾರದ ಲಕ್ಷಣಗಳೇ ಇರುತ್ತವೆ. ಬಾಧಿತರನ್ನು ಪ್ರತ್ಯೇಕವಾಗಿ ಇರಿಸುವುದು ಒಳಿತು ಎನ್ನುತ್ತಾರೆ ವೈದ್ಯರು.
ದಕ್ಷಿಣ ಕನ್ನಡದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಡಾರ ಏರಿದೆ. ಹೆಚ್ಚಿನ ಮಂದಿಯನ್ನು ತಪಾಸಣೆಗೆ ಒಳಪಡಿಸಿರುವುದೂ ಕಾರಣವಿರಬಹುದು. ದಡಾರ ರುಬೆಲ್ಲಾ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ರೋಗದ ಶಂಕಿತರನ್ನು ತಪಾಸಣೆಗೆ ಒಳಪಡಿಸುವಂತೆ ಮೆಡಿಕಲ್ ಕಾಲೇಜುಗಳಿಗೂ ಸೂಚನೆ ನೀಡಲಾಗಿದೆ. ಲಕ್ಷಣ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯಬೇಕು. – ಡಾ| ರಾಜೇಶ್ ಆರ್‌ಸಿಎಚ್ ಅಧಿಕಾರಿ, ದ.ಕ. ಜಿಲ್ಲೆ



