ಹುಲಿ ವೇಷವೆಂದರೆ ಬರಿ ಕುಣಿತವಲ್ಲ, ಅದು ಕರಾವಳಿಗರ ಭಾವನೆ ಹಾಗೂ ಆರಾಧನೆಯ ರೂಪವಾಗಿದೆ.

ಕಡಲನಗರಿಯಲ್ಲಿ ನಡೆಯುವಂತಹ ಪ್ರತಿಯೊಂದು ಹಿಂದೂ ಸನಾತನ ಧರ್ಮದ ಆಚರಣೆಗಳಲ್ಲಿ ಹುಲಿ ವೇಷ ಮಿಂಚುತ್ತದೆ. ಕೆಲವರು ಹರಕೆ ರೂಪದಲ್ಲಿ ಹುಲಿ ವೇಷವನ್ನು ಧಾರಣೆ ಮಾಡುವ ವಾಡಿಕೆ ಮಂಗಳೂರು, ಉಡುಪಿಗಳಲ್ಲಿ ಹೆಚ್ಚಾಗಿವೆ. ಅಂತೆಯೇ ಈ ವರ್ಷದ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿಯ ನಿಟ್ಟೂರಿನಲ್ಲಿ ಹುಲಿವೇಷ ಸ್ಪರ್ಧೆ ನಡೆದಿದ್ದು, ಈ ಹುಲಿವೇಷ ತೊಟ್ಟು ಕುಣಿಯುತಿದ್ದ ವೇಳೆ ವೇಷಧಾರಿ ಮೇಲೆ ಆವೇಶ ಬಂದ ಅಚ್ಚರಿ ಘಟನೆ ನಡೆದಿದೆ.

ಮೈಮೇಲೆ ಆವೇಶ ಬಂದು ವೇದಿಕೆಗೆ ಹಾಕಿದ್ದ ರೆಡ್ ಕಾರ್ಪೆಟ್ ನ್ನ ಬಾಯಲ್ಲಿ ಕಚ್ಚಿ ಹರಿದು ಹಾಕಿದ್ದಾರೆ. ಈ ಸಂದರ್ಭ ಹುಲಿವೇಷಧಾರಿಯನ್ನ ನಿಯಂತ್ರಣಕ್ಕೆ ತರುವಲ್ಲಿ ಸಹ ವೇಷಧಾರಿಗಳು ಹರಸಾಹಸ ಪಟ್ಟಿದ್ದು, ಈ ವೇಳೆ ಸಹವೇಷಧಾರಿಗೂ ಕಚ್ಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ಹರಕೆ ಹೊತ್ತು ವೇಷಹಾಕುವವರ ಮೈಮೇಲೆ ಆವೇಶ ಬರುತ್ತದೆ ಎಂಬ ಪ್ರತೀತಿ ಕರಾವಳಿಗರಲ್ಲಿದೆ. ಆವೇಶ ಬಂದಲ್ಲಿ ವೇಷಧಾರಿಯನ್ನ ನಿಯಂತ್ರಣಕ್ಕೆ ತರದೇ ಹೋದ ಪಕ್ಷದಲ್ಲಿ ಕಾಡಿಗೆ ಓಡಿಹೊಗಬಹುದು, ಇನ್ನೊಂದು ಜೀವಿಯ ಮೇಲೆ ಆಕ್ರಮಣ ಮಾಡಬಹುದು ಎಂಬ ನಂಬಿಕೆ ತುಳುವರದ್ದಾಗಿದೆ.
ಇನ್ನೂ ಉಡುಪಿಯಲ್ಲಿ ನಡೆದ ಘಟನೆ ಎಲ್ಲರನ್ನ ಆಶ್ಚರ್ಯ ಚಕಿತರನ್ನಾಗಿ ಮಾಡಿಸಿದಂತು ಸತ್ಯದ ಮಾತಾಗಿದೆ.



