ತಮಿಳು ನಟ ಮತ್ತು ನಿರ್ದೇಶಕ ಜಿ. ಮಾರಿಮುತ್ತು ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

58 ವರ್ಷದವರಾಗಿದ್ದ ಇವರು ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು, ಇಂದು ಬೆಳಗ್ಗೆ 8.30ರ ಸುಮಾರಿಗೆ ತಮಿಳು ಎಥಿರ್ನೀಚಲ್ ಎಂಬ ಟಿವಿ ಕಾರ್ಯಕ್ರಮವೊಂದರ ಡಬ್ಬಿಂಗ್ ಮಾಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಮಾರಿಮುತ್ತು ಅವರು 50 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕುಸಿದು ಬಿದ್ದ ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಮಾರಿಮುತ್ತು ಅವರು ಯೂಟ್ಯೂಬ್ ಸೆನ್ಸೇಷನ್ ಆಗಿದ್ದು ‘ಜೈಲರ್’ ಮತ್ತು ‘ರೆಡ್ ಸ್ಯಾಂಡಲ್ ವುಡ್’ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಉತ್ತಮ ವಿಮರ್ಶೆಗಳನ್ನು ಪಡೆದಿದ್ದರು. . ಅವರ ಹಠಾತ್ ಸಾವಿಗೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.



