ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರ್ ಸ್ ಮೂಲ್ಕಿ ಇದರ ಉದ್ಘಾಟನಾ ಹಾಗೂ ಪದಗ್ರಹಣ ಸಮಾರಂಭ ಇದೇ ಬರುವ ಸೆ. 16 ರಂದು ಮುಲ್ಕಿಯಲ್ಲಿರುವ ಮೂಲ್ಕಿ ಸುಂದರ್ ರಾಜ್ ಶೆಟ್ಟಿ ಕನ್ವೆಕ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಜೀವನ್ ಕೆ. ಶೆಟ್ಟಿ ಹೇಳಿದ್ದಾರೆ.

ಇವರು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿ, ಕಾರ್ಯಕ್ರಮವನ್ನು ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಎನ್ ವಿನಯ್ ಹೆಗ್ಡೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ರಾಜೇಂದ್ರ ಕಲ್‌ಬಾವಿ, ಜೀವನ್ ಕೆ ಶೆಟ್ಟಿ, ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಎ.ಕೋಟ್ಯಾನ್ ಸೇರಿದಂತೆ ಗಣ್ಯಾತೀಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರ್ ಸ್ , ಮೂಲ್ಕಿ (ಎಸಿಇಎಂ) ಎಂಬುವುದು ಅಭಿವೃದ್ಧಿ ಹಾಗೂ ಸಿವಿಲ್ ಎಂಜಿನಿಯರ್ ವೃತ್ತಿಪರರ ಒಗ್ಗಟ್ಟು ಮತ್ತು ಹಿತದೃಷ್ಟಿಯಿಂದ ಹೊಸದಾಗಿ ರೂಪುಗೊಂಡಿರುವ ಸಂಘಟನೆಯಾಗಿದೆ. ಸಿವಿಲ್ ಎಂಜಿನಿಯರ್ ರಂಗದ ಬಹುತೇಕರೂ ಈ ಸಂಘಟನೆಯ ಸದಸ್ಯರಾಗಿದ್ದು, ಮೂಲ್ಕಿ ರೋಟರಿ ಕ್ಲಬ್‌ನ ಜಂಟಿ ಸಹಯೋಗದೊಂದಿಗೆ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ಶತಮನೋತ್ಸವದ ಹಿನ್ನೆಲೆಯಲ್ಲಿ ಎಂಜಿನಿಯರ್ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ.

ಅಂದು ‘ಎಂಜಿನಿಯರ್’ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗೋಷ್ಠಿ ಏರ್ಪಡಿಸಲಾಗಿದ್ದು, ಪ್ರತಿ ವರ್ಷವೂ ಎಂಜಿನಿಯರ್ ದಿನದಂದು ಸಾಧಕರನ್ನು ಸನ್ಮಾನಿಸುವ ಜೊತೆಗೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಲ್ಕಿ, ಮಂಗಳೂರು, ಉಡುಪಿ, ಕಾರ್ಕಳ ಮೂಡಬಿದ್ದ್ರೆ. ಬೆಳ್ತಂಗಡಿ, ಸುಳ್ಯ, ಪುತ್ತೂರು ಮತ್ತು ಉಳ್ಳಾಲ ತಾಲೂಕಿನ ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು, ಪ್ರಮುಖ ಬಿಲ್ಡರ್‌ಗಳು, ಗುತ್ತಿಗೆದಾರರು, ಡೀಲರ್‌ಗಳು, ನಿರ್ಮಾಣ ಮತ್ತು ಒಳಾಂಗಣ ವಿನ್ಯಾಸ ಸಂಬಂಧಿ ಕಂಪನಿಗಳು ಮತ್ತು ಇತರ ಪ್ರಮುಖ ಸದಸ್ಯರು ಸೇರಿದಂತೆ ಸುಮಾರು 1,500ಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆ ಇದೆ. ಈ ಸಂಪೂರ್ಣ ಕಾರ್ಯದ ತಾತ್ಕಾಲಿಕ ಅವಧಿಯು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಂತೆ ಸುಮಾರು ಐದು ಗಂಟೆಗಳಿರುತ್ತವೆ ಎಂದರು.



