ಬಂಟ್ವಾಳ: ಹಿಂಬದಿಯಿಂದ ಬಂದ ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಕಾರು ಜಖಂಗೊಂಡ ಘಟನೆ ಕಲ್ಲಡ್ಕ ಎಂಬಲ್ಲಿ ನಿನ್ನೆ ಮಧ್ಯಾಹ್ನ ವೇಳೆ ನಡೆದಿದೆ. ಮಹಾಲಿಂಗ್ ಭಟ್ ಎಂಬವರ ಖಾಸಗಿ ಕಾರಿಗೆ ಕೆ.ಎನ್.ಆರ್.ಸಿ. ಕಂಪೆನಿಗೆ ಸೇರಿದ ಘನಗಾತ್ರದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಬಹುಭಾಗ ಜಖಂಗೊಂಡಿದೆಯಲ್ಲದೆ ಎರಡು ಟಯರ್ ಗಳು ಒಡೆದುಹೋಗಿದೆ. ಅದೃಷ್ಟವಶಾತ್ ಕಾರಿನ ಚಾಲಕ ಸಹಿತ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರಿಗೆ ಲಾರಿ ಗುದ್ದಿದೆ.




ಕಲ್ಲಡ್ಕ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ನಡೆಯುತ್ತಿದ್ದು ಅಮೆ ನಡಿಗೆಯಲ್ಲಿ ಪ್ರಯಾಣ ಮಾಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿಯೂ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ ಎಂದರೆ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡಿರುವ ಕೆ.ಎನ್.ಆರ್.ಸಿ.ಕಂಪೆನಿಗೆ ಸೇರಿದ ಲಾರಿ ಇದಾಗಿದೆ.
ಕಂಪೆನಿಗೆ ಸೇರಿದ ವಾಹನಗಳು ಇದೇ ರೀತಿ ಅನೇಕ ಬಾರಿ ಅಪಘಾತಕ್ಕೆ ಕಾರಣವಾಗಿದೆ. ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆಯನ್ನು ಮಾಡುತ್ತಿರುವ ಬಗ್ಗೆ ಮತ್ತು ಅದರಿಂದಾಗುವ ಪರಿಣಾಮಗಳ ಬಗ್ಗೆ ಇತ್ತೀಚಿಗೆ ಸಂಸದರ ಬಳಿ ಸಾರ್ವಜನಿಕರು ದೂರಿದ್ದರು. ಕಂಪೆನಿ ಮಾತ್ರ ಯಾರ ಮಾತಿಗೂ ಬೆಲೆ ಕೊಡದೆ ಮೌನವಾಗಿ ಉಳಿದುಬಿಟ್ಟಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.



