ಭಾರತೀಯ ಸೇನೆಗೆ ಕಾವಲು ಮತ್ತು ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುತ್ತಿದ್ದ, 6 ವರ್ಷದ ಶ್ವಾನ ಉಗ್ರರ ಗುಂಡೇಟಿಗೆ ಬಲಿಯಾದ ಘಟನೆ ಜಮ್ಮು-ಕಾಶ್ಮೀರದ ರಜೌರಿಯಲ್ಲಿ ನಡೆದಿದೆ. ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಸೇನೆಯನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಭದ್ರತಾ ಪಡೆಯ ರಕ್ಷಣೆಗೆ ಶ್ವಾನ ಮುಂದಾಗಿದೆ.

ಇನ್ನೂ ಆರು ವರ್ಷದ ಹೆಣ್ಣು ಲ್ಯಾಬ್ರಡಾರ್ ಕೆಂಟ್ 21st Army Dog Unitನಲ್ಲಿ ಸೇವೆ ಸಲ್ಲಿಸುತ್ತಿತ್ತು. ತನ್ನ ಮಾರ್ಗದರ್ಶಕನನ್ನು ರಕ್ಷಿಸುವ ಭರದಲ್ಲಿ ತನ್ನ ಪ್ರಾಣವನ್ನೇ ಅರ್ಪಿಸಿದೆ ಎಂದು ಸೇನಾಪಡೆ ಮಾಹಿತಿ ನೀಡಿದೆ. ಈ ಹಿಂದೆ ಉಗ್ರರನ್ನು ಗುರುತಿಸೋದ್ರಲ್ಲಿ ಮತ್ತು ಹಲವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕೆಂಟ್ ಉಗ್ರರು ಹಾರಿಸಿದ ಗುಂಡಿ ಏಟು ತಗಲಿ ಇಹಲೋಕ ತ್ಯಜಿಸಿದೆ.
ಇನ್ನೂ ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು ವಲಯದ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ರಜೌರಿಯ ನರ್ಲಾ ಗ್ರಾಮದಲ್ಲಿ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಆಗ ಸೇನೆ ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ.
ಇದೇ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಹತ್ಯೆಯಾಗಿರುವ ಉಗ್ರ ಪಾಕಿಸ್ತಾನ ಮೂಲದವ ಎಂದು ಶಂಕಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.



