ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ನಡೆದ ‘ಆಗಮನ’ ಕಾರ್ಯಕ್ರಮದಲ್ಲಿ ಕೃಷ್ಣೇಗೌಡ ಅವರು ಉಪನ್ಯಾಸ ನೀಡಿದರು.
‘ಇವತ್ತು ಏನನ್ನಾದರೂ ಕಲಿತ್ತಿದ್ದೇನೆಯೇ?’ ಎಂದು ಪ್ರತಿದಿನ ಮಲಗುವ ಮೊದಲು ನಿಮ್ಮನ್ನು ನೀವೇ ಕೇಳಿಕೊಳ್ಳಿ’ ಎಂದು ಸಾಧಕರ ಮಾತನ್ನು ಉಲ್ಲೇಖಿಸಿದರು.
‘ಮಾಹಿತಿಯೇ ಜ್ಞಾನವಲ್ಲ. ಮಾಹಿತಿಯನ್ನು ಅರಗಿಸಿಕೊಂಡಾಗ ಮಾತ್ರ ಜ್ಞಾನ ಬರುತ್ತದೆ. ಅದನ್ನು ಸಮರ್ಪಕವಾಗಿ ನಿರ್ವಹಿಸುವುದೇ ವಿವೇಕ. ಆದರೆ, ಇಂದು ವಿವೇಕವು ಜ್ಞಾನದಲ್ಲಿ ಕಳೆದುಹೋಗಿದೆ. ಜ್ಞಾನವು ಮಾಹಿತಿಯಲ್ಲಿ ಕಳೆದುಹೋಗಿದೆ. ಇಂದು ಪರೀಕ್ಷೆ ಮುಗಿದರೆ, ವಿದ್ಯಾರ್ಥಿಗಳಿಗೆ ಮಾಹಿತಿಯು ಮರೆತುಹೋಗುತ್ತಿದೆ’ ಎಂದು ಕುಟುಕಿದರು.
‘ಬದುಕಿನಲ್ಲಿ ವಿಜ್ಞಾನದ ಮಾಪನಕ್ಕೆ ಸಿಗದೇ ಇರುವುದು ಸಾಕಷ್ಟು ಇದೆ. ಶಿಕ್ಷಣದ ಆಚೆಗೂ ಕಲಿಯಲು ಇದೆ. ಈ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡುತ್ತಿವೆ’ ಎಂದು ಅವರು ಶ್ಲಾಘಿಸಿದರು.
‘ಹಿಂದೆ ದೈಹಿಕ ಶಕ್ತಿ ಇದ್ದರೆ, ಅಧಿಕಾರ ಸಿಗುತ್ತಿತ್ತು. ಬಳಿಕ ಸಂಪತ್ತು, ಅನಂತರ ಶಿಕ್ಷಣ ಆ ಬಳಿಕ ಉದ್ಯೋಗ ಬೇಕಾಯಿತು. ಈಗ ಜ್ಞಾನ ಮತ್ತು ಕೌಶಲದ ಕಾಲವಾಗಿದೆ ಸ್ಪರ್ಧಾತ್ಮಕ ಯುಗದಲ್ಲಿ ‘ನಾನು ಮಾತ್ರ ಉದ್ಧಾರ ಆಗಬೇಕು’ ಎಂಬ ಕ್ರೌರ್ಯ ಇದೆ. ಅದರಿಂದ ನಾವೆಲ್ಲ ಹೊರಬರಬೇಕು ‘ನನಗೆ ಎಲ್ಲ ಗೊತ್ತಿಲ್ಲ ಎನ್ನುವ ಜ್ಞಾನ ಇದೆ’ ಅದುವೇ ನನ್ನ ಜ್ಞಾನ ಎಂದು ತತ್ವಜ್ಞಾನಿ ಸಾಕ್ರೆಟಿಸ್ ಹೇಳಿದ್ದಾರೆ. ಅದಕ್ಕಾಗಿ ಅವರು ಜ್ಞಾನಿ ಆಗಿದ್ದರು ಎಂದರು.
ಕ್ರಿ.ಶ. 1900ರಲ್ಲಿ ದೇಶದಲ್ಲಿ ಶೇ 3ರಷ್ಟು ಅಕ್ಷರಸ್ಥರು ಇದ್ದರು. ಈಗಿನ ಪೀಳಿಗೆಯ ಯಾರೂ ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ಶಿಕ್ಷಣ ಕ್ರಾಂತಿಯಾಗಿದೆ. ತಂತ್ರಜ್ಞಾನ ಕ್ರಾಂತಿ ಆಗುತ್ತಿದ್ದು, ಮಾಹಿತಿ ನಿಮ್ಮ ಅಂಗೈಯಲ್ಲಿದೆ. ಆದರೆ, ಮಾಹಿತಿ ಪಡೆಯುವುದೇ ಜ್ಞಾನ ಅಲ್ಲ.
‘ಜಾತಿ, ಧರ್ಮ, ಭೌಗೋಳಿಕ ಮೇರೆ ಎಲ್ಲವನ್ನೂ ಮೀರಿ ನಿಲ್ಲುವುದು ನಿಜವಾದ ಕಲೆ ಎಂದು ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ ಹೇಳಿದ್ದರು. ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯ ಅವರು ಮಹಮ್ಮದ್ ರಫಿ ಅವರನ್ನು ದೇವರು ಎಂದಿದ್ದರು. ನಿಮ್ಮ ಸುತ್ತಲು ನಡೆಯುವ ದರಿದ್ರ ಚರ್ಚೆಗಳನ್ನೆಲ್ಲ ಮೀರಿ ಅವರೆಲ್ಲ ಮನುಷ್ಯರಾಗಿದ್ದಾರೆ ಎಂದರು.

ಪರಿಮಾಣಾತ್ಮಕ ಬೆಳವಣಿಗೆಗಿಂತ ಗುಣಾತ್ಮಕ ಬೆಳವಣಿಗೆ ಮುಖ್ಯ. ಆದರೆ, ನಮಗೆ ಯಾವುದು ಬದುಕಿನ ಮಾಪನ ಎಂಬುದೇ ಗೊತ್ತಿಲ್ಲ. ಒಳಿತನ್ನು ಗ್ರಹಿಸಿ ಗೌರವಿಸಿ.
‘ಜಗತ್ತಿನಲ್ಲಿ 4500ಭಾಷೆಗಳಿದ್ದು, ಅದರಲ್ಲಿನ ಶ್ರೇಷ್ಠ _30 ಭಾಷೆಗಳಲ್ಲಿ ಕನ್ನಡ ಒಂದು ಎಂದು ಅಮೆರಿಕಾದ ಭಾಷಾ ಅಧ್ಯಯನ ಕೇಂದ್ರವೊಂದು ಹೇಳಿದೆ. ಇಂಗ್ಲಿಷ್ ಅತಾರ್ತಿಕ ಭಾಷೆ. ಇಂಗ್ಲಿಷ್ ಅಕ್ಷರಗಳಿಗೆ ನಿರ್ದಿಷ್ಟ ಉಚ್ಛಾರಣೆ ಇಲ್ಲ’ ಎಂದ ಅವರು, ‘ಕರಾವಳಿ ಜನ ಮಾತನಾಡಿ ಮಾತನಾಡಿ ತುಳು ಭಾಷೆ ಉಳಿಸಿದರು’ ಎಂದು ಶ್ಲಾಘಿಸಿದರು.
ಇದಕ್ಕೂ ಮೊದಲು ನಡೆದ ಗೋಷ್ಠಿಯಲ್ಲಿ ‘ಉದ್ಯಮಶೀಲ ಪಯಣ’ದ ಬಗ್ಗೆ ಬರೋಡಾದ ಉದ್ಯಮಿ ಶಶಿಧರ್ ಬಿ. ಶೆಟ್ಟಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್, ವಿಧ್ಯಾರ್ಥಿ ಮುಖ್ಯ ಕ್ಷೇಮಪಾಲನಾಧಿಕಾರಿ ಪ್ರಣೀತ್, ಅಕಾಡೆಮಿಕ್ಸ್ ಡೀನ್ ಡಾ.ದಿವಾಕರ ಶೆಟ್ಟಿ, ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಶೆಟ್ಟಿ, ಇದ್ದರು.



